ವಿದೇಶ

ಪಾಕಿಸ್ತಾನ: ಕರಾಚಿಯಲ್ಲಿ ಅವಳಿ ಬಾಂಬ್ ಸ್ಫೋಟ; 12 ಮಂದಿ ಸಾವು

Vishwanath S

ಕರಾಚಿ: ಪಾಕಿಸ್ತಾನದಲ್ಲಿ ಸಂಭವಿಸಿದ ಸ್ಫೋಟದಲ್ಲಿ ರಕ್ತದೋಕುಳಿಯೇ ಹರಿದಿದೆ. ಪಾಕ್ ನ ಆರ್ಥಿಕ ಬೆನ್ನೆಲಬಾದ ಕರಾಚಿಯಲ್ಲಿ ಎರಡು ಸ್ಫೋಟಗಳು ಸಂಭವಿಸಿವೆ. ಇದುವರೆಗೆ 12 ಮಂದಿ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ.

ಆರ್ಥಿಕ ರಾಜಧಾನಿಯಾಗಿರುವ ಕರಾಚಿಯಲ್ಲಿ ಸ್ಫೋಟದ ಹೊಡೆತಕ್ಕೆ ಹಲವು ಮಂದಿ ಗಾಯಗೊಂಡಿದ್ದು, ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಲಾಗುತ್ತಿದೆ. ಪೊಲೀಸರೊಂದಿಗೆ ಇದಿ ಫೌಂಡೇಷನ್ ಸದಸ್ಯರು ಗಾಯಾಳುಗಳನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಪಾಕಿಸ್ತಾನದ ರೇಂಜರ್ ಗಳು ಮತ್ತು ಪೊಲೀಸರು ಕೂಡ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಗಾಯಾಳುಗಳನ್ನು ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಕರಾಚಿಯ ಶೇರ್ಷಾ ಪ್ರದೇಶದ ಪರಚಾ ಚೌಕ್ ಬಳಿ ಮಧ್ಯಾಹ್ನ 1:30ಕ್ಕೆ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಖಾಸಗಿ ಬ್ಯಾಂಕ್‌ನ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದ ಹೆಚ್ಚಿನ ಭಾಗ ಚರಂಡಿಯಲ್ಲಿ ಹೂತು ಹೋಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಎರಡನೇ ಸ್ಫೋಟ ಸಂಭವಿಸಿದೆ. ಆದಾಗ್ಯೂ, ಅದರ ಸಾಮರ್ಥ್ಯ ಮೊದಲನೆಯ ಸ್ಫೋಟದಷ್ಟು ಇರಲಿಲ್ಲ. ಬ್ಲಾಸ್ಟ್ ಗೆ ಕಟ್ಟಡದ ಬಳಿ ನಿಲ್ಲಿಸಿದ್ದ ವಾಹನಗಳು ತೀವ್ರವಾಗಿ ಹಾನಿಗೀಡಾಗಿವೆ. ಜೆಸಿಬಿ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಅಕ್ರಮವಾಗಿ ಚರಂಡಿ ಮೇಲೆ ನಿರ್ಮಿಸಲಾಗಿತ್ತು ಕಟ್ಟಡ!
ಕರಾಚಿ ದಕ್ಷಿಣ ವಲಯದ ಡಿಐಜಿ ಶಾರ್ಜೀಲ್ ಖರಾಲ್, ಕಾಲುವೆ ಮೇಲೆ ನಿರ್ಮಿಸಲಾದ ಬ್ಯಾಂಕ್ ಕಟ್ಟಡದಲ್ಲಿ ಸ್ಫೋಟ ಸಂಭವಿಸಿ, ಅನಿಲ ಸೋರಿಕೆಯಾಗಿರುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಸ್ಫೋಟದಲ್ಲಿ ಕುಸಿದು ಬಿದ್ದಿರುವ ಬ್ಯಾಂಕ್ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂದು ಹೇಳಿದ್ದಾರೆ. ಚರಂಡಿ ಸ್ವಚ್ಛಗೊಳಿಸುವ ಸಂಬಂಧ ಬ್ಯಾಂಕ್‌ಗೆ ಕಟ್ಟಡ ತೆರವು ಮಾಡುವಂತೆ ಹಲವು ಬಾರಿ ನೋಟಿಸ್‌ ನೀಡಿದ್ದರೂ ಬ್ಯಾಂಕ್‌ ಸಿಬ್ಬಂದಿ ಕಟ್ಟಡ ತೆರವು ಮಾಡಿಲ್ಲ ಎಂದು ಆರೋಪಿಸಿದ್ದಾರೆ.

SCROLL FOR NEXT