ವಿದೇಶ

ಭಾರತದಲ್ಲಿ ಪತ್ತೆಯಾದ ಕೊರೋನಾ ರೂಪಾಂತರ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆ 'ಕಪ್ಪಾ' ಮತ್ತು 'ಡೆಲ್ಟಾ' ಎಂದು ನಾಮಕರಣ!

Srinivasamurthy VN

ಜಿನೀವಾ: ಭಾರತದಲ್ಲಿ ಮೊದಲು ಪತ್ತೆಯಾಗಿ ಬಳಿಕ ಜಗತ್ತಿನ 51ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪತ್ತೆಯಾಗಿರುವ 2 ರೂಪಾಂತರಿ ಕೊರೋನಾ ವೈರಸ್ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆ 'ಕಪ್ಪಾ'(kappa) ಮತ್ತು 'ಡೆಲ್ಟಾ' (delta) ಎಂದು ಹೆಸರಿಸಿದೆ.

ಹೌದು... ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಕೋವಿಡ್-19 ರ B.1.617.1 ಮತ್ತು B.1.617.2 ರೂಪಾಂತರ ತಳಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ನಾಮಕರಣ ಮಾಡಿದ್ದು, 'ಕಪ್ಪಾ'(kappa) ಮತ್ತು 'ಡೆಲ್ಟಾ' (delta) ಎಂದು ಹೆಸರಿಸಿದೆ. ಗ್ರೀಕ್ ಅಕ್ಷರಗಳನ್ನು ಬಳಸಿಕೊಂಡು ಕ್ರಮವಾಗಿ  B.1.617.1ಗೆ ಕಪ್ಪಾ'(kappa) ಮತ್ತು B.1.617.2 ಗೆ 'ಡೆಲ್ಟಾ' (delta) ಎಂದು ಹೆಸರಿಸಲಾಗಿದೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ಘೋಷಣೆ ಮಾಡಿದೆ.

ಸಾರ್ಸ್ ಕೋವ್2 (SARS COV2) ಹೆಸರನ್ನು ಅನ್ನು ಬಳಸಲು ಅನುಕೂಲವಾಗಲು ಮತ್ತು ಸದ್ಯ ಇರುವ ವೈಜ್ಞಾನಿಕ ಹೆಸರಿಗೆ ಪರ್ಯಾಣ ಮಾಡದೆ ಹೊಸ ಲೇಬಲ್ (ಹೆಸರು) ಹಾಕುತ್ತಿದ್ದೇವೆ. ಇದು ಸಾರ್ವಜನಿಕ ಚರ್ಚೆಯಲ್ಲಿ ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂದು ಡಬ್ಲ್ಯುಎಚ್‌ಒನ ಕೋವಿಡ್  -19 ವಿಷಯಗಳ ತಾಂತ್ರಿಕ ವಿಭಾಗದ ಮುಖ್ಯಸ್ಥೆ ಡಾ ಮಾರಿಯಾ ವ್ಯಾನ್ ಕೆರ್ಖೋವ್ ಸೋಮವಾರ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಕಂಡುಬಂದ ಕೋವಿಡ್–19ರ B.1.617.1ರೂಪಾಂತರವನ್ನು 'ಕಪ್ಪಾ' ಎಂದು ಹೆಸರಿಸಿದರೆ, B1.617.2 ರೂಪಾಂತರಕ್ಕೆ 'ಡೆಲ್ಟಾ' ಎಂದು ಕರೆಯಲಾಗಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ ತಿಳಿಸಿದೆ. ಭಾರತ ಮಾತ್ರವಲ್ಲದೇ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಕೋವಿಡ್ ತಳಿಗೆ ಬೀಟಾ,  ಬ್ರಿಟನ್ ನಲ್ಲಿ ಪತ್ತೆಯಾದ ತಳಿಗೆ ಆಲ್ಫಾ, ಬ್ರೆಜಿಲ್ ನಲ್ಲಿ ಪತ್ತೆಯಾದ ವೈರಸ್ ತಳಿಗಳಿಗೆ ಗಮ್ಮಾ ಮತ್ತು ಝೀಟಾ, ಅಮೆರಿಕದಲ್ಲಿ ಪತ್ತೆಯಾದ ವೈರಸ್ ತಳಿಗಳಿಗೆ ಎಪ್ಸಿಲಾನ್ ಮತ್ತು ಲೋಟಾ, ಫಿಲಿಫೈನ್ಸ್ ನಲ್ಲಿ ಪತ್ತೆಯಾದ ತಳಿಗೆ ಥೇಟಾ ಎಂದು ನಾಮಕರಣ ಮಾಡಿದೆ.

ವಿಶ್ವದಾದ್ಯಂತ ಕಳವಳಕಾರಿಯಾಗಿರುವ B.1.617 ರೂಪಾಂತರಿತ ವೈರಸ್‌ಗೆ ಯಾವುದೇ ಆಧಾರವಿಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ‘ಭಾರತೀಯ ರೂಪಾಂತರ’ ಎಂದು ಬಳಸುತ್ತಿದ್ದ ಬಗ್ಗೆ ಮೇ 12 ರಂದು, ಕೇಂದ್ರ ಆರೋಗ್ಯ ಸಚಿವಾಲಯವು ಆಕ್ಷೇಪ ವ್ಯಕ್ತಪಡಿಸಿತ್ತು. ಬಿ .1.617 ರೂಪಾಂತರವನ್ನು  ‘ಇಂಡಿಯನ್ ವೆರಿಯಂಟ್’ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುತ್ತಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಆರೋಗ್ಯ ಇಲಾಖೆಯು, ವಿಶ್ವ ಆರೋಗ್ಯ ಸಂಸ್ಥೆಯಿಂದ ಈ ರೂಪಾಂತರಕ್ಕೆ ‘ಭಾರತದ ರೂಪಾಂತರ’ಎಂಬ ಹೆಸರು ನೀಡಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ ಸುಮಾರು ಮೂರು ವಾರಗಳ ನಂತರ  ಡಬ್ಲ್ಯುಎಚ್‌ಒನ ಈ ನಿರ್ಧಾರ ಹೊರಬಿದ್ದಿದೆ. ಕೆಲ ಮಾಧ್ಯಮಗಳಲ್ಲೂ ಬಂದ ಈ ಕುರಿತ ವರದಿಯನ್ನು ಅಲ್ಲಗಳೆದಿತ್ತು.
 

SCROLL FOR NEXT