ವಿದೇಶ

ನೇಪಾಳ: ವಿಶ್ವಾಸಮತ ಕಳೆದುಕೊಂಡ ಪ್ರಧಾನಿ ಕೆಪಿ ಶರ್ಮಾ ಒಲಿ, ಪದತ್ಯಾಗಕ್ಕೆ ಸಿದ್ಧತೆ

Srinivasamurthy VN

ಕಠ್ಮಂಡು: ನೇಪಾಳದಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು ತಲೆದೋರಿದ್ದು, ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ವಿಶ್ವಾಸ ಮತಯಾಚನೆಯಲ್ಲಿ ಸೋಲು ಕಾಣುವ ಮೂಲಕ ಪ್ರಧಾನಿ ಹುದ್ದೆ ತ್ಯಜಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಈ ಹಿಂದೆ ಚೀನಾದಿಂದ ಪ್ರಚೋದನೆಗೆ ಒಳಗಾಗಿ ಭಾರತದ ವಿರುದ್ಧ ಕಾಲು ಕೆರೆದು ಹೇಳಿಕೆಗಳನ್ನು ನೀಡುತ್ತಿದ್ದ ಪ್ರಧಾನಿ ಕೆಪಿ ಶರ್ಮಾ ಒಲಿ ಸಂಸತ್ತಿನ ವಿಶ್ವಾಸ ಕಳೆದುಕೊಂಡಿದ್ದಾರೆ. 275 ಸದಸ್ಯರು ಇರುವ ಪಾರ್ಲಿಮೆಂಟ್‌ನಲ್ಲಿ ಅವರು ವಿಶ್ವಾಸ ಉಳಿಸಿಕೊಳ್ಳಲು ಕನಿಷ್ಠ 136 ಮತಗಳನ್ನು ಪಡೆಯಬೇಕಾಗಿತ್ತು.

ಸೋಮವಾರ ರಾಷ್ಟ್ರಪತಿ ಬಿದ್ಯಾದೇವಿ ಭಂಡಾರಿ ಉಪಸ್ಥಿತಿಯಲ್ಲಿ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ಒಲಿ ಅವರು 93 ಮತಗಳನ್ನು ಮಾತ್ರ ಪಡೆದುಕೊಂಡರು. ಆ ಮೂಲಕ ಒಲಿಗೆ ಸೋಲಾಗಿದ್ದು, ಅವರು ಹುದ್ದೆ ತ್ಯಜಿಸಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. 

ಒಲಿ ಶರ್ಮಾ ಅವರ ನೇಪಾಳ ಕಮ್ಯುನಿಸ್ಟ್‌ ಪಾರ್ಟಿಗೆ ನೀಡಿದ್ದ ಬೆಂಬಲವನ್ನು ಪುಷ್ಪಕಮಲ್‌ ದಹಾಲ್‌ 'ಪ್ರಚಂಡ' ನೇತೃತ್ವದ ಬಣ ಹಿಂಪಡೆದಿರುವ ಹಿನ್ನೆಲೆಯಲ್ಲಿ ಅವರಿಗೆ ಸೋಲಾಯಿತು. 124 ಸದಸ್ಯರು ಒಲಿ ವಿರುದ್ಧ ಮತ ಚಲಾಯಿಸಿದರೆ, 15 ಸದಸ್ಯರು ತಟಸ್ಥ ಧೋರಣೆ ತಳೆದರು. ಪ್ರಮುಖವಾಗಿ ನೇಪಾಳಿ  ಕಾಂಗ್ರೆಸ್‌ ಪಾರ್ಟಿ (61 ಸದಸ್ಯರು) ಹಾಗೂ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ನೇಪಾಳ (49 ಸದಸ್ಯರು) ಒಲಿ ವಿರುದ್ಧ ಮತ ಹಾಕಿದರು. ಸಿಪಿಎನ್‌ನಲ್ಲಿನ ಆಂತರಿಕ ಬಿಕ್ಕಟ್ಟು ಬಗೆಹರಿಸಲು ಚೀನಾ ಸಹ ಸಾಕಷ್ಟು ಪ್ರಯತ್ನ ನಡೆಸಿತ್ತು.

SCROLL FOR NEXT