ವಿದೇಶ

ನೇಪಾಳದಲ್ಲಿ ಹೊಸ ಸರ್ಕಾರ ರಚನೆಗೆ ನೇಪಾಳಿ ಕಾಂಗ್ರೆಸ್‌ ನಿರ್ಧಾರ

Lingaraj Badiger

ಕಠ್ಮಂಡು: ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರಿಗೆ ವಿಶ್ವಾಸ ಮತಯಾಚನೆಯಲ್ಲಿ ಸೋಲುಂಟಾದ ನಂತರ ನೇಪಾಳ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ಗುರುವಾರದೊಳಗೆ ಹೊಸ ಸರ್ಕಾರ ರಚಿಸುವಂತೆ ಬಹುಮತವಿರುವ ಪಕ್ಷಗಳಿಗೆ ಆಹ್ವಾನ ನೀಡಿದ್ದು, ಈಗ ಪ್ರಮುಖ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ ನೂತನ ಸರ್ಕಾರ ರಚಿಸಲು ನಿರ್ಧರಿಸಿದೆ.

ಮಂಗಳವಾರ ನಡೆದ ನೇಪಾಳಿ ಕಾಂಗ್ರೆಸ್ (ಎನ್‌ಸಿ) ಪದಾಧಿಕಾರಿಗಳು ಸಭೆಯಲ್ಲಿ ಹೊಸ ಸರ್ಕಾರ ರಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೇರ್ ಬಹದ್ದೂರ್ ಡಿಯುಬಾ ನೇತೃತ್ವದ ಕಾಂಗ್ರೆಸ್ ಪಕ್ಷ, ಸಿಪಿಎನ್-ಎಂಸಿ ಮತ್ತು ಜನತಾ ಸಮಾಜಬಾದಿ ಪಕ್ಷದ ಸಂಸದರ ಬೆಂಬಲವನ್ನು ಪಡೆಯುವ ಆಶಯ ಹೊಂದಿದೆ.

ನೇಪಾಳದಲ್ಲಿ ಈಗ ರಾಜಕೀಯ ಪಕ್ಷಗಳ ನಂಬರ್ ಗೇಮ್ ಆರಂಭವಾಗಿದ್ದು, ಸರ್ಕಾರ ರಚಿಸಲು ಸಿಪಿಎನ್-ಯುಎಂಎಲ್ ಬಣದ ಸಂಸದರೂ ಸಹಾಯ ಮಾಡಬಹುದು ಎಂದು ನೇಪಾಳಿ ಕಾಂಗ್ರೆಸ್ ನಂಬಿದೆ ಎಂದು ದಿ ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.

271 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ನೇಪಾಳಿ ಕಾಂಗ್ರೆಸ್ 61 ಹಾಗೂ ಸಿಪಿಎನ್-ಎಂಸಿ 49 ಸದಸ್ಯರನ್ನು ಹೊಂದಿದ್ದು, ಸಮ್ಮಿಶ್ರ ಸರ್ಕಾರ ರಚಿಸಲು 26 ಸದಸ್ಯರ ಬೆಂಬಲ ಬೇಕಿದೆ. 

32 ಸದಸ್ಯರನ್ನು ಹೊಂದಿರುವ ಜನತಾ ಸಮಾಜಬಾದಿ ಪಕ್ಷ-ನೇಪಾಳ(ಜೆಎಸ್‌ಪಿ-ಎನ್) ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ವರದಿ ತಿಳಿಸಿದೆ.

SCROLL FOR NEXT