ಕೋವಿಡ್-19 ಬಿಕ್ಕಟ್ಟು 
ವಿದೇಶ

ಕೋವಿಡ್-19: ತಪ್ಪು ಲೆಕ್ಕಾಚಾರದಿಂದ ಭಾರತದಲ್ಲಿ ಸಂಕಷ್ಟದ ಸ್ಥಿತಿ- ಡಾ. ಅಂಥೋನಿ ಫೌಸಿ

ಕೊರೊನಾ ಅಂತ್ಯದ ಕುರಿತ ವಿಷಯದಲ್ಲಿ ತಪ್ಪು ಲೆಕ್ಕಾಚಾರದಿಂದಾಗಿ ಪ್ರಸ್ತುತ ಭಾರತ ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ ಎಂದು ಅಮೆರಿಕಾ ಅಧ್ಯಕ್ಷರ ಮುಖ್ಯ ವೈದ್ಯಕೀಯ ಸಲಹೆಗಾರ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಅಂಥೋನಿ ಫೌಸಿ ಹೇಳಿದ್ದಾರೆ.

ವಾಷಿಂಗ್ಟನ್: ಕೊರೊನಾ ಅಂತ್ಯದ ಕುರಿತ ವಿಷಯದಲ್ಲಿ ತಪ್ಪು ಲೆಕ್ಕಾಚಾರದಿಂದಾಗಿ ಪ್ರಸ್ತುತ ಭಾರತ ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ ಎಂದು ಅಮೆರಿಕಾ ಅಧ್ಯಕ್ಷರ ಮುಖ್ಯ ವೈದ್ಯಕೀಯ ಸಲಹೆಗಾರ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಅಂಥೋನಿ ಫೌಸಿ ಹೇಳಿದ್ದಾರೆ.

ಅಮೆರಿಕ ಸೆನೆಟ್ ಆರೋಗ್ಯ, ಶಿಕ್ಷಣ ಮತ್ತು ಕಾರ್ಮಿಕ ಪಿಂಚಣಿ ಸಮಿತಿಗೆ ಕೋವಿಡ್‌ ಕುರಿತ ಚರ್ಚೆ ವೇಳೆ ಮಾತನಾಡಿದ ಡಾ.ಅಂಥೋನಿ ಫೌಸಿ ಅವರು, 'ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಅಂತ್ಯಗೊಂಡಿತು ಎಂಬ ತಪ್ಪು ಅಭಿಪ್ರಾಯದಿಂದ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಿದ್ದರಿಂದ ಭಾರತದಲ್ಲಿ ಪ್ರಸ್ತುತ  ಪರಿಸ್ಥಿತಿ ಎದುರಾಗಿದೆ. ಗಂಭೀರವಾದ ವಿಷಯದಲ್ಲಿ ಪರಿಸ್ಥಿತಿಯನ್ನು ಯಾರು ಲಘುವಾಗಿ ಪರಿಗಣಿಸಬಾರದು. ಭಾರತದಲ್ಲಿ ಎರಡನೇ ಅಲೆಯಿಂದ ಉದ್ಭವವಾಗಿರುವ ಪರಿಸ್ಥಿತಿ ಪ್ರಪಂಚಕ್ಕೆ ಅರ್ಥವಾಗುತ್ತದೆ ಎಂದು ಹೇಳಿದರು.

ಅಂತೆಯೇ ಭವಿಷ್ಯದ ಪರಿಸ್ಥಿತಿ ದೃಷ್ಟಿಯಲ್ಲಿರಿಸಿಕೊಂಡು ಜನರ ಆರೋಗ್ಯ ದೃಷ್ಟಿಯಿಂದ ಮೂಲಸೌಕರ್ಯ ಬಲಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ಜಾಗತಿಕ ಸಾಂಕ್ರಾಮಿಕ ರೋಗಗಳ ವಿರುದ್ಧದ ಹೋರಾಟದಲ್ಲಿ ಯಾವುದೇ ದೇಶವೂ ಏಕಾಂಗಿಯಾಗಿ ಹೋರಾಡುತ್ತಿಲ್ಲ. ಜಗತ್ತಿನ ಎಲ್ಲ ದೇಶಗಳು ಒಗ್ಗೂಡಿ  ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ವೈರಸ್ ಯಾವ ದೇಶದಲ್ಲಿ ಉಳಿದಿದೆ ಎಂಬುದು ಮುಖ್ಯವಲ್ಲ. ಅದು ಮತ್ತೆ ಪ್ರಪಂಚದಾದ್ಯಂತ ಹರಡುವ ಅಪಾಯವಿದೆ. ಯಾವುದೇ ಕಾರಣಕ್ಕೂ ಗಂಭೀರ ಪರಿಸ್ಥಿತಿಯನ್ನು ನಿರ್ಲಕ್ಷ್ಯ ಮಾಡಬಾರದು ಎಂಬುದನ್ನು ನಾವು ಇದರಿಂದ ಅರಿತಿದ್ದೇವೆ ಎಂದೂ ಡಾ. ಫೌಸಿ  ಎಚ್ಚರಿಸಿದರು.

ಅಲ್ಲದೆ ಇದು ಭವಿಷ್ಯದ ಸಾಂಕ್ರಾಮಿಕಗಳಿಗೆ ಈಗಿನಿಂದಲೇ ನಾವು ಸಾರ್ವಜನಿಕ ಆರೋಗ್ಯ ಮೂಲಭೂತ ಸೌಕರ್ಯಗಳನ್ನು ಸನ್ನದ್ಧವಾಗಿರಿಸಬೇಕು. ಹಾಲಿ ಪರಿಸ್ಥಿತಿ ನಮಗೆ ಒಂದು ದೊಡ್ಡ ಪಾಠವಾಗಿರಬೇಕು. ನಮ್ಮ ಸ್ಥಳೀಯ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯವನ್ನು ನಿರ್ಮಿಸುವುದನ್ನು ನಾವು  ಮುಂದುವರಿಸಬೇಕಾಗಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಫೌಸಿ ಹೇಳಿದರು.

ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ ಫೆಕ್ಟಿಯಸ್ ಡಿಸೀಸಸ್ (ಎನ್ಐಎಐಡಿ) ಸಂಸ್ಥೆಯ ನಿರ್ದೇಶಕರಾಗಿರುವ ಡಾ. ಫೌಸಿ ಅವರು ಅಧ್ಯಕ್ಷ ಜೋ ಬೈಡೆನ್ ಅವರ ಮುಖ್ಯ ವೈದ್ಯಕೀಯ ಸಲಹೆಗಾರರು ಕೂಡ ಆಗಿದ್ದಾರೆ. 

ಇದೇ ವೇಳೆ ಚರ್ಚೆಯ ನೇತೃತ್ವ ವಹಿಸಿದ್ದ ಸೆನೆಟರ್ ಪ್ಯಾಟಿ ಮುರ್ರೆ ಅವರು ಮಾತನಾಡಿ, ಭಾರತದಲ್ಲಿ ವಿನಾಶಕಾರಿಯಾಗಿ ಪರಿಣಮಿಸಿರುವ ಕೋವಿಡ್-19 ನ ಉಲ್ಬಣವು ಇತರರಿಗೆ ಒಂದು ಕಠಿಣ ಎಚ್ಚರಿಕೆಯಾಗಿದೆ. ಜಗತ್ತಿನ ಎಲ್ಲ ಭಾಗಗಳಲ್ಲಿಯೂ ಸೋಂಕು ಅಂತ್ಯವಾಗದ ಹೊರತು ಅಮೆರಿಕದಲ್ಲಿ ಸೋಂಕು ಅಂತ್ಯ  ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಮತ್ತೆ ಕೈ ಜೋಡಿಸುವ ಅಧ್ಯಕ್ಷ ಜೋ ಬೈಡೆನ್ ನಿರ್ಧಾರವನ್ನು ನಾವು ಶ್ಲಾಘಿಸುತ್ತೇವೆ. ಅಂತೆಯೇ ಜಾಗತಿಕ ಲಸಿಕಾ ಅಭಿಯಾನಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಮತ್ತು ಜುಲೈ 4 ರೊಳಗೆ 60 ಮಿಲಿಯನ್ ಅಸ್ಟ್ರಾಜೆನೆಕಾ  ಲಸಿಕೆಗಳನ್ನು ಇತರೆ ದೇಶಗಳಿಗೆ ದೇಣಿಗೆ ನೀಡಲು ಬದ್ಧವಾಗಿರುವ ಮೂಲಕ ಜಾಗತಿಕ ಹೋರಾಟವನ್ನು ಬಿಡೆನ್ ಆಡಳಿತವು ಮುನ್ನಡೆಸುತ್ತಿದೆ. ಇದು ಖುಷಿಯ ವಿಚಾರ ಎಂದು ಅವರು ಹೇಳಿದ್ದಾರೆ.

'ಭಾರತದಲ್ಲಿನ ಪರಿಸ್ಥಿತಿ ಹೃದಯ ವಿದ್ರಾವಕವಾಗಿದೆ. ವೈರಸ್ ಸಾಂಕ್ರಾಮಿಕವನ್ನು ನಾವು ನಿರ್ಲಕ್ಷಿಸಿದರೆ ಅಥವಾ ಪರೀಕ್ಷಿಸದೇ ಇದ್ದಾಗ ಅದು ಹೇಗೆ ಹೆಚ್ಚು ರೂಪಾಂತರಗೊಂಡು ಹರಡುತ್ತದೆ ಮತ್ತು ಆರೋಗ್ಯ ವ್ಯವಸ್ಥೆಗಳ ಮೇಲೆ ಹೇಗೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬುದಕ್ಕೆ ಭಾರತದ ಹಾಲಿ ಪರಿಸ್ಥಿತಿ  ನಿದರ್ಶನವಾಗಿದೆ. ಆ ಮೂಲಕ ಜಗತ್ತಿನಲ್ಲಿ ಈ ಸಾಂಕ್ರಾಮಿಕ ಕೊನೆಯಾಗದ ಹೊರತು ಅಮೆರಿಕದಲ್ಲಿ ಇದನ್ನು ಕೊನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಈ ಕುರಿತು ಇನ್ನೂ ಹೆಚ್ಚೆಚ್ಚು ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT