ವಿದೇಶ

ಮಂಗಳ ಗ್ರಹದ ಅಂಗಳಕ್ಕೆ ಬಂದಿಳಿದ ಚೀನಾ ದೇಶದ ಬಾಹ್ಯಾಕಾಶ ನೌಕೆ 

Sumana Upadhyaya

ಬೀಜಿಂಗ್: ಚೀನಾ ಬಾಹ್ಯಾಕಾಶ ನೌಕೆ ಶನಿವಾರ ಮಂಗಳ ಗ್ರಹವನ್ನು ತಲುಪಿದೆ ಎಂದು ಚೀನಾದ ರಾಷ್ಟ್ರೀಯ ಅಂತರಿಕ್ಷ ಆಡಳಿತ ಸಂಸ್ಥೆ(ಸಿಎನ್ ಎಸ್ಎ) ದೃಢಪಡಿಸಿದೆ.

ಟಿಯಾನ್ವೆನ್-1 ಎಂಬ ಬಾಹ್ಯಾಕಾಶ ನೌಕೆಯು ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ನ್ನು ಒಳಗೊಂಡಿದ್ದು ಇದನ್ನು ಕಳೆದ ವರ್ಷ ಜುಲೈ 23ರಂದು ಚೀನಾ ಬಾಹ್ಯಾಕಾಶ ಸಂಸ್ಥೆ ಉಡಾವಣೆ ಮಾಡಿತ್ತು. ಸೌರಮಂಡಲ ವ್ಯವಸ್ಥೆಯಲ್ಲಿ ಚೀನಾದ ಗ್ರಹಗಳ ಪರಿಶೋಧನೆಯಲ್ಲಿ ಇದು ಮೊದಲ ಹೆಜ್ಜೆಯಾಗಿದೆ.

ಒಂದೇ ಕಾರ್ಯಾಚರಣೆಯಲ್ಲಿ ಕೆಂಪು ಗ್ರಹ ಮಂಗಳನ ಸುತ್ತ ಪರಿಭ್ರಮಿಸುವುದು, ಇಳಿಯುವುದು ಮತ್ತು ತಿರುಗುವುದು ಈ ಬಾಹ್ಯಾಕಾಶ ನೌಕೆಯ ಯಾನದ ಉದ್ದೇಶ ಎಂದು ಚೀನಾದ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

ಕಳೆದ ವರ್ಷ ಜುಲೈಯಲ್ಲಿ ಉಡಾಯಿಸಲಾದ ಬಾಹ್ಯಾಕಾಶ ನೌಕೆ ಬಾಹ್ಯಾಕಾಶದಲ್ಲಿ ಪರಿಭ್ರಮಿಸುತ್ತಾ ಸುಮಾರು 7 ತಿಂಗಳ ನಂತರ ಕಳೆದ ಫೆಬ್ರವರಿ ತಿಂಗಳಲ್ಲಿ ಮಂಗಳನ ಕಕ್ಷೆಗೆ ಪ್ರವೇಶಿಸಿತ್ತು. ಎಲ್ಲಿ ಸರಿಯಾಗಿ ಲ್ಯಾಂಡಿಂಗ್ ಆಗುವುದು ಎಂದು ಸುಮಾರು ಎರಡು ತಿಂಗಳು ಕಾಲ ಸಮೀಕ್ಷೆ ನಡೆಸುತ್ತಾ ಕೊನೆಗೆ ಇಂದು ಮಂಗಳ ಗ್ರಹಕ್ಕೆ ಇಳಿದಿದೆ.

ಟಿಯಾನ್ವೆನ್ -1  ರೋವರ್, ಸುಮಾರು 240 ಕೆಜಿ ತೂಕ ಹೊಂದಿದ್ದು, 6 ಚಕ್ರಗಳು ಮತ್ತು ನಾಲ್ಕು ಸೌರ ಫಲಕಗಳನ್ನು ಹೊಂದಿದೆ. ಪ್ರತಿ ಗಂಟೆಗೆ 200 ಮೀಟರ್ ನಷ್ಟು ದೂರ ಚಲಿಸುವ ಸಾಮರ್ಥ್ಯ ಹೊಂದಿದೆ.

ಇದು ಮಲ್ಟಿ-ಸ್ಪೆಕ್ಟ್ರಲ್ ಕ್ಯಾಮೆರಾ, ನೆಲ-ನುಗ್ಗುವ ರಾಡಾರ್ ಮತ್ತು ಹವಾಮಾನ ಮಾಪನ ಸೇರಿದಂತೆ ಆರು ವೈಜ್ಞಾನಿಕ ಸಾಧನಗಳನ್ನು ಹೊಂದಿದೆ, ಮಂಗಳ ಗ್ರಹದ ಸುತ್ತ ಸುತ್ತುತ್ತಾ ಮೂರು ತಿಂಗಳು ಬಾಹ್ಯಾಕಾಶ ಸಂಬಂಧಿಸಿದ ಸಂಶೋಧನೆ ಮಾಡುವ ಸಾಧ್ಯತೆಯಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ), ಅಮೆರಿಕ ಮತ್ತು ಚೀನಾ ಇತ್ತೀಚೆಗೆ ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸಿದೆ. ಇದಕ್ಕೂ ಮುನ್ನ ಅಮೆರಿಕ ಸಂಯುಕ್ತ ಸಂಸ್ಥಾನ, ರಷ್ಯಾ, ಐರೋಪ್ಯ ಒಕ್ಕೂಟ ಮತ್ತು ಭಾರತ ಈ ಹಿಂದೆ ಮಂಗಳ ಗ್ರಹಕ್ಕೆ ಯಶಸ್ವಿಯಾಗಿ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿವೆ.

2014 ರಲ್ಲಿ ತನ್ನ ಬಾಹ್ಯಾಕಾಶ ನೌಕೆಯನ್ನು ಮಂಗಳ ಗ್ರಹದ ಕಕ್ಷೆಗೆ ಯಶಸ್ವಿಯಾಗಿ ಕಳುಹಿಸಿದ ಏಷ್ಯಾದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು.

SCROLL FOR NEXT