ವಿದೇಶ

ಎನ್ಎಸ್ಎ ಸಭೆಯಲ್ಲಿ ಭಾಗಿಯಾಗಲು ಪಾಕಿಸ್ತಾನಕ್ಕೆ ಭಾರತದ ಆಹ್ವಾನ; ಅಫ್ಘಾನಿಸ್ತಾನ ಶಾಂತಿ ಕುರಿತು ಚರ್ಚೆ

Srinivas Rao BV

ನವದೆಹಲಿ: ಕಾಬೂಲ್ ಅನ್ನು ತಾಲಿಬಾನ್ ಸ್ವಾಧೀಪಡಿಸಿಕೊಂಡ ಮೇಲೆ ಅಫ್ಘಾನಿಸ್ತಾನದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಫ್ಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಮತ್ತು ಪ್ರಾದೇಶಿಕ ಶಕ್ತಿಗಳ ಜತೆ ಚರ್ಚೆ ನಡೆಸಬೇಕೆಂಬ ಆಲೋಚನೆಯನ್ನು ಭಾರತ ಇಟ್ಟುಕೊಂಡಿದೆ.

ಅಫ್ಘಾನಿಸ್ತಾನ ಭವಿಷ್ಯ ಎಂಬ ವಿಚಾರ ಕುರಿತಂತೆ ನವೆಂಬರ್ ನಲ್ಲಿ ನವದೆಹಲಿಯಲ್ಲಿ ಪ್ರಾದೇಶಿಕ ಭದ್ರತಾ ಸಂವಾದ ನಡೆಸಲು ತೀರ್ಮಾನಿಸಲಾಗಿದೆ.     

ಈ ಮಹತ್ವಪೂರ್ಣ ಸಭೆಯಲ್ಲಿ ಇರಾನ್, ರಷ್ಯಾ, ಚೀನಾ, ಪಾಕಿಸ್ತಾನ, ತಜಕಿಸ್ತಾನ್ ಹಾಗೂ ಉಜ್ಬೇಕಿಸ್ತಾನ ರಾಷ್ಟ್ರಗಳಿಗೆ ಆಹ್ವಾನ ನೀಡಲಾಗಿದೆ. ಪಾಕಿಸ್ತಾನ ಸೇರಿದಂತೆ ಎಲ್ಲ ಆರು ರಾಷ್ಟ್ರಗಳು ನವೆಂಬರ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ.

ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೋಯಿದ್ ಯೂಸುಫ್, ಕಳೆದ ವಾರ ಭಾರತದ ಆಹ್ವಾನವನ್ನ ಸ್ವೀಕರಿಸಿದ್ದಾರೆ ಎಂದು ಪಾಕಿಸ್ತಾನದ ಮೂಲಗಳು ದೃಢಪಡಿಸಿವೆ. ಆದರೆ, ದೆಹಲಿ ಸಭೆಯಲ್ಲಿ ಭಾಗವಹಿಸಬೇಕೆ ಅಥವಾ ಬೇಡವೇ ಅನ್ನೋ ಬಗ್ಗೆ ಇನ್ನು ತೀರ್ಮಾನ ಕೈಗೊಂಡಿಲ್ಲ ಅಂತಾ ಪಾಕಿಸ್ತಾನ ತಿಳಿಸಿದೆ.

ಈ ಮಧ್ಯೆ, ಅಕ್ಟೋಬರ್ 20ರಂದು ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಚರ್ಚಿಸಲು ರಷ್ಯಾದ ಮಾಸ್ಕೋದಲ್ಲಿ ಸಭೆ ಆಯೋಜಿಸಾಗಿದೆ. ಸಭೆಯಲ್ಲಿ ಭಾರತ, ಚೀನಾ, ಪಾಕಿಸ್ತಾನ, ಅಮೆರಿಕ, ಮಧ್ಯ ಏಷ್ಯಾ ರಾಷ್ಟ್ರಗಳಿಗೆ ರಷ್ಯಾ ಆಹ್ವಾನಿಸಿದೆ. ಈ ಸಭೆಯಲ್ಲಿ ತಾಲಿಬಾನ್ ಸರ್ಕಾರದ ಉಪ ಪ್ರಧಾನಿಗೂ ಆಹ್ವಾನ ನೀಡಲಾಗಿದೆ. ಸಭೆಗೆ ಹಾಜರಾಗುವುದಾಗಿ ಭಾರತ ಈಗಾಗಲೇ ಖಚಿತ ಪಡಿಸಿದೆ. 

ಆಗಸ್ಟ್ 15ರಂದು ತಾಲಿಬಾನ್ ಪಡೆಗಳು ಅಫ್ಘಾನಿಸ್ತಾನ ವಶಪಡಿಸಿಕೊಂಡ ನಂತರ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಶಿಯಾ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಕಂದಾಹಾರ್ ಪ್ರಾರ್ಥನಾ ಮಂದಿರದ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ 47ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಈ ಕಾರಣದಿಂದಾಗಿ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲಸುವ ಸಂಬಂಧ ಭಾರತ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ ನಲ್ಲಿ ನಡೆಯಲಿರುವ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ.

SCROLL FOR NEXT