ವಿದೇಶ

ಅಮೆರಿಕ ನಮ್ಮನ್ನು ವಂಚಿಸಿದೆ: ಸ್ವದೇಶದಲ್ಲೇ ಉಳಿದ ಆಫ್ಘನ್ನರಿಂದ ಹಿಡಿ ಶಾಪ

Harshavardhan M

ಕಾಬೂಲ್: ಅಮೆರಿಕ ಅಫ್ಘಾನಿಸ್ತಾನ ತೊರೆಯುವ ಅಂತಿಮ ದಿನದವರೆಗೂ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾನವಾಗಿತ್ತು. ಅಮೆರಿಕ ಸ್ಥಳಾಂತರ ಕಾರ್ಯಾಚರಣೆ ಪ್ರಕ್ರಿಯೆಗೆ ಕ್ರಮಬದ್ಧವಾದ ಯೋಜನೆ ಮಾಡದಿದ್ದುದೇ ಈ ಎಲ್ಲಾ ಗೊಂದಲಗಳಿಗೆ ಕಾರಣ ಎಂದು ಹಲವು ರಾಷ್ಟ್ರಗಳು ದೂರಿದ್ದವು. 

ದೂರುಗಳ ನಡುವೆಯೂ ಅಮೆರಿಕ ನಿರ್ವಹಣೆಗೆ ಮೆಚ್ಚುಗೆಗಳೂ ವ್ಯಕ್ತವಾಗಿದ್ದವು. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಅವರು ಅಮೆರಿಕ ಸ್ಥಳಾಂತರ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದರು. 

ಈ ನಡುವೆ ಅಫ್ಘಾನಿಸ್ತಾನದಲ್ಲೇ ಉಳಿದವರು ಅಮೆರಿಕವನ್ನು ನಂಬಿಕೆದ್ರೋಹಿ ಎಂದು ದೂಷಿಸುತ್ತಿದ್ದಾರೆ. ಹಲವು ಮಂದಿ ಅಫ್ಘಾನಿಸ್ತಾನಿಯರು ಅಮೆರಿಕ ಪ್ರವೇಶಿಸಲು ಇಚ್ಛಿಸಿದ್ದರು. ಅಮೆರಿಕ ಪ್ರಯಾನಕ್ಕೆ ಎಲ್ಲಾ ಏರ್ಪಾಟುಗಳನ್ನೂ ಮಾಡಿಕೊಂಡಿದ್ದರು. ಅಂತಿಮ ಕ್ಷಣದಲ್ಲಿ ಅಮೆರಿಕ ಅಧಿಕಾರಿಗಳು ತಾವೇ ಕರೆದೊಯ್ಯುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿ ಅವರಿಗೆ ಮನೆಯಲ್ಲೇ ಇರುವಂತೆ ಸಲಹೆ ನೀಡಿದ್ದರು. 

ಅಮೆರಿಕ ಮಾತು ನಂಬಿದ ಹಲವು ಮಂದಿ ಆಫ್ಘನ್ನರು ವಿಮಾನ ನಿಲ್ದಾಣಕ್ಕೆ ಬರದೆ ಮನೆಯಲ್ಲೇ ಉಳಿದಿದ್ದರು. ಜಗತ್ತೇ ನೋಡ ನೋಡುತ್ತಿರುವಂತೆಯೇ ಅಮೆರಿಕ ಅಫ್ಘಾನಿಸ್ತಾನ ನೆಲದಿಂದ ಜಾಗ ಖಾಲಿ ಮಾಡಿತು. ಈಗ ಸ್ವದೇಶದಲ್ಲಿಯೇ ಉಳಿದ ಆಫ್ಘನ್ನರು ಅಮೆರಿಕಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
 

SCROLL FOR NEXT