ವಿದೇಶ

ಅಫ್ಘಾನಿಸ್ತಾನ: ಪಂಜಶೀರ್ ನಿಯಂತ್ರಣದಲ್ಲಿದೆ ಎಂದ ತಾಲಿಬಾನ್, ಪ್ರತಿರೋಧ ಪಡೆಯಿಂದ ನಿರಾಕರಣೆ

Srinivasamurthy VN

ಕಾಬೂಲ್: ತಾಲಿಬಾನ್ ಗೆ ಕಬ್ಬಿಣದ ಕಡಲೆಯಾಗಿರುವ ಪಂಜಶೀರ್ ಪ್ರಾಂತ್ಯವನ್ನುನಿಯಂತ್ರಣಕ್ಕೆ ಪಡೆದಿರುವುದಾಗಿ ತಾಲಿಬಾನ್ ಮುಖಂಡರು ಹೇಳಿಕೊಂಡಿದ್ದು, ಇದರ ಬೆನ್ನಲ್ಲೇ ಈ ಹೇಳಿಕೆಯನ್ನು ಪ್ರತಿರೋಧ ಪಡೆಗಳು ಅಲ್ಲಗಳೆದಿವೆ.

ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ವಿರುದ್ಧ ಹೋರಾಡುತ್ತಿರುವ ಕೊನೆಯ ಪ್ರದೇಶವಾದ ಕಾಬೂಲ್‌ನ ಉತ್ತರ ಭಾಗದಲ್ಲಿರುವ ಪಂಜ್‌ಶಿರ್ ಕಣಿವೆಯನ್ನು ವಶಪಡಿಸಿಕೊಂಡಿದ್ದೇವೆ ಎಂದು ತಾಲಿಬಾನ್ ಸೇನೆ ಹೇಳಿದೆ. 

'ಸರ್ವಶಕ್ತನಾದ ಅಲ್ಲಾಹುವಿನ ಕೃಪೆಯಿಂದ ನಾವು ಅಫ್ಗಾನಿಸ್ತಾನವನ್ನು ಸಂಪೂರ್ಣ ವಶಕ್ಕೆ ಪಡೆದಿದ್ದೇವೆ. ಪಂಜ್‌ಶಿರ್‌ನಲ್ಲಿ ಸಮಸ್ಯೆ ಸೃಷ್ಟಿಸಿದವರನ್ನು ಸೋಲಿಸಲಾಗಿದ್ದು, ಈಗ ನಮ್ಮ ನಿಯಂತ್ರಣದಲ್ಲಿದೆ' ಎಂದು ತಾಲಿಬಾನ್ ಕಮಾಂಡರ್ ಹೇಳಿಕೆ ನೀಡಿದ್ದಾರೆ.

ಈ ಸಂಬಂಧ ಕಾಬೂಲ್‌ನಲ್ಲಿ ಗುಂಡನ್ನು ಹಾರಿಸುವ ಮೂಲಕ ಸಂಭ್ರಮಾಚರಣೆ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲೂ ಈ ಕುರಿತು ಉಲ್ಲೇಖಿಸಲಾಗಿದೆ.

ಆದರೆ ಈ ಹೇಳಿಕೆಯನ್ನು ಪಂಜ್‌ಶಿರ್‌ ನಾಯಕರು ನಿರಾಕರಿಸಿದ್ದು, ತಾಲಿಬಾನ್‌ಗೆ ತೀವ್ರ ಪ್ರತಿರೋಧ ಒಡ್ಡುತ್ತಿರುವ ಪಂಜ್‌ಶಿರ್ ಕಣಿವೆಯ ನಾಯಕರಾದ ಮಾಜಿ ಅಧ್ಯಕ್ಷ ಅಮರುಲ್ಲಾ ಸಲೇಹ್ ವರದಿಯನ್ನು ನಿರಾಕರಿಸಿದ್ದು, ಸೋಲನ್ನು ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.

'ನಾವು ಕಷ್ಟದ ಪರಿಸ್ಥಿತಿಯಲ್ಲಿದ್ದೇವೆ ಎಂಬುದರಲ್ಲಿ ಸಂದೇಹವಿಲ್ಲ. ನಾವು ತಾಲಿಬಾನಿಗಳ ಆಕ್ರಮಣಕ್ಕೆ ಒಳಗಾಗಿದ್ದೇವೆ' ಎಂದು ಸಲೇಹ್‌ ಹೇಳಿರುವ ವಿಡಿಯೊವನ್ನು ಬಿಬಿಸಿ ವರ್ಲ್ಡ್‌ ಪತ್ರಕರ್ತ ಟ್ವಿಟರ್‌ನಲ್ಲಿ ಹಂಚಿದ್ದಾರೆ.

ಇದಕ್ಕೆ ಇಂಬು ನೀಡುವಂತೆ ತಾಲಿಬಾನ್ ವರದಿಗಳನ್ನು ತಕ್ಷಣಕ್ಕೆ ದೃಢೀಕರಿಸಲು ಸಾಧ್ಯವಿಲ್ಲ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ. 

ತಾಲಿಬಾನಿಗಳು 1996 ಹಾಗೂ 2001ರಲ್ಲಿ ಅಫ್ಗಾನಿಸ್ತಾನವನ್ನು ಆಳಿದ ಸಂದರ್ಭದಲ್ಲೂ ಪಂಜ್‌ಶಿರ್ ಕಣಿವೆಯನ್ನು ವಶಕ್ಕೆ ಪಡೆಯಲು ಸಾಧ್ಯವಾಗಿರಲಿಲ್ಲ.

SCROLL FOR NEXT