ವಿದೇಶ

ಭಾರತದ ಕೋವಿಡ್-19 ಪ್ರಯಾಣಿಕ ಪ್ರಮಾಣಪತ್ರದ ಬಗ್ಗೆ ಬ್ರಿಟನ್ ಹೇಳಿದ್ದಿಷ್ಟು...

Srinivas Rao BV

ಲಂಡನ್: ತನ್ನ ದೇಶಕ್ಕೆ ವಿದೇಶದಿಂದ ಬರುವವರ ಲಸಿಕೆ ಪ್ರಮಾಣಪತ್ರಗಳು ಅಲ್ಲಿನ ಕನಿಷ್ಠ ಮಾನದಂಡಗಳನ್ನು ಪೂರೈಕೆ ಮಾಡಿರಬೇಕು ಎಂದು ಬ್ರಿಟನ್ ಹೇಳಿದ್ದು, ತನ್ನ ಅಂತಾರಾಷ್ಟ್ರೀಯ ಪ್ರಯಾಣ ನಿಯಮಗಳಿಗೆ ಸಂಬಂಧಿಸಿದಂತೆ ಭಾರತದೊಂದಿಗೆ ಹಂತ ಹಂತವಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ.

ಕೋವಿಶೀಲ್ಡ್ ಲಸಿಕೆಯನ್ನು ಬ್ರಿಟನ್ ನ ಪ್ರಯಾಣ ಸಲಹೆಯ ಪಟ್ಟಿಯ ಅರ್ಹತೆಯ ವಿಭಾಗಕ್ಕೆ ಸೇರಿಸಲಾಗುತ್ತಿದೆ. ಆದರೆ ಲಸಿಕೆ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನುಮೋದನೆ ಪಡೆದುಕೊಂಡಿರುವ 18 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಇಲ್ಲ. ಪರಿಣಾಮ ಭಾರತದಿಂದ ಬ್ರಿಟನ್ ಗೆ ಪ್ರಯಾಣಿಸುವವರನ್ನು ಲಸಿಕೆ ಪಡೆಯದವರು ಎಂದು ಪರಿಗಣಿಸಿ 10 ದಿನಗಳ ಕ್ವಾರಂಟೈನ್ ನ್ನು ವಿಧಿಸಲಾಗುತ್ತಿದೆ.

ಈ ಕಾರಣದಿಂದಾಗಿ ಹಲವಾರು ಗೊಂದಲಗಳುಂಟಾಗಿದ್ದು, ಬ್ರಿಟನ್ ಸರ್ಕಾರದ ಮೂಲಗಳು ಸೆ.22 ರಂದು ನೀಡಿರುವ ಮಾಹಿತಿಯ ಪ್ರಕಾರ, ಅನುಮೋದಿತ ರಾಷ್ಟ್ರಗಳ ಪಟ್ಟಿಗಳನ್ನು ನಿರಂತರ ಪರಿಗಣನೆಗೆ ಮುಕ್ತವಾಗಿಟ್ಟಿದೆ. ಆದರೆ ಭಾರತದ ಲಸಿಕೆ ಪ್ರಮಾಣಪತ್ರವನ್ನು ಅನುಮೋದಿಸುವುದಕ್ಕೆ ಬೇಕಾಗಿರುವ ಮಾನದಂಡಗಳ ಪೂರೈಕೆ ಬಗ್ಗೆ ಸ್ಪಷ್ಟತೆ ದೊರೆತಿಲ್ಲ.

ಬ್ರಿಟನ್ ನೀತಿಯಲ್ಲಿ ಬೇರೆ ದೇಶಗಳಿಂದ ಬರುವ ಪ್ರಯಾಣಿಕರಿಗೆ ಪ್ರವೇಶ ಕಲ್ಪಿಸಬೇಕಾದರೆ, ಫೈಜರ್, ಆಕ್ಸ್ಫರ್ಡ್ ಆಸ್ಟ್ರಾಜೆನಿಕಾ, ಮಾಡರ್ನಾ ಮತ್ತು ಜಾನ್ಸನ್ ಲಸಿಕೆಗಳನ್ನು ಪಡೆದವರ ಪ್ರಮಾಣಪತ್ರಗಳನ್ನು ಪರಿಗಣಿಸುತ್ತಿದ್ದೇವೆ. ಈಗ ಈ ಪಟ್ಟಿಗೆ ಆಸ್ಟ್ರಜೆನಿಕಾ ಕೋವಿಶೀಲ್ಡ್, ಅಸ್ಟ್ರಾಜೆನೆಕಾ ವ್ಯಾಕ್ಸೇವ್ರಿಯಾ, ಮಾಡರ್ನಾ ಟಕೆಡಾ ಲಸಿಕೆಯ ಪ್ರಮಾಣಪತ್ರಗಳನ್ನು ಸೇರಿಸಲಾಗಿದೆ ಎಂದು ಬ್ರಿಟನ್ ಸರ್ಕಾರದ ವಕ್ತಾರರು ಹೇಳಿದ್ದಾರೆ.

ಸಾರ್ವಜನಿಕ ಆರೋಗ್ಯ ಹಾಗೂ  ಪ್ರಯಾಣವನ್ನು ಸುರಕ್ಷಿತ, ಸ್ಥಿರ ರೀತಿಯಲ್ಲಿ ಪುನಾರಂಭಗೊಳಿಸುವುದು ನಮ್ಮ ಆದ್ಯತಾಗಿದೆ. ಆದ್ದರಿಂದ ಎಲ್ಲಾ ದೇಶಗಳ ಲಸಿಕೆ ಪ್ರಮಾಣಪತ್ರಗಳು ಕನಿಷ್ಠ ಮಾನದಂಡಗಳನ್ನು ಪೂರೈಕೆ ಮಾಡಬೇಕು ಎಂದು ಬ್ರಿಟನ್ ಹೇಳಿದ್ದು ಭಾರತವೂ ಸೇರಿದಂತೆ ಎಲ್ಲಾ ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ನಾವು ನಮ್ಮ ಹಂತ ಹಂತದ ವಿಧಾನವನ್ನು ಜಾರಿಗೆ ತರಲು ಕೆಲಸ ಮಾಡುತ್ತೇವೆ ಎಂದು ಬ್ರಿಟನ್ ಹೇಳಿದೆ.

SCROLL FOR NEXT