ವಿದೇಶ

ಹಿಜಾಬ್ ವಿರೋಧಿ ಪ್ರತಿಭಟನೆ: 'ನೈತಿಕತೆ ಪೋಲೀಸ್' ವಿಸರ್ಜಿಸಿದ ಇರಾನ್

Srinivasamurthy VN

ಟೆಹ್ರಾನ್: ಬೃಹತ್ ಹಿಜಾಬ್ ವಿರೋಧಿ ಪ್ರತಿಭಟನೆಗೆ ಮಣಿದಿರುವ ಇರಾನ್ ಸರ್ಕಾರ ಕೊನೆಗೂ ತನ್ನ ದೇಶದಲ್ಲಿನ 'ನೈತಿಕತೆ ಪೋಲೀಸ್' ವ್ಯವಸ್ಥೆಯನ್ನು ವಿಸರ್ಜಿಸಿದೆ.

ಹೌದು.. ಇರಾನ್ ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಹ್ಸಾ ಅಮಿನಿಯ ಬಂಧನ ಮತ್ತು ಸಾವಿನ ಬಳಿಕ ಭುಗೆಲೆದ್ದಿದ್ದ ಬೃಹತ್ ಪ್ರತಿಭಟನೆಗೆ ಮಣಿದಿರುವ ಇರಾನ್ ಸರ್ಕಾರ ತನ್ನ ತನ್ನ ನೈತಿಕತೆಯ ಪೊಲೀಸರನ್ನು ರದ್ದುಗೊಳಿಸಿದೆ. ಈ ಬಗ್ಗೆ ಇರಾನ್ ಮಾಧ್ಯಮಗಳು ವರದಿ ಮಾಡಿದ್ದು, "ನೈತಿಕತೆಯ ಪೊಲೀಸರಿಗೆ ನ್ಯಾಯಾಂಗದೊಂದಿಗೆ ಯಾವುದೇ ಸಂಬಂಧವಿಲ್ಲ" ಮತ್ತು ಅದನ್ನು ರದ್ದುಗೊಳಿಸಲಾಗಿದೆ ಎಂದು ಅಟಾರ್ನಿ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೆರಿ ಹೇಳಿದ್ದಾರೆಂದು ISNA ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

"ಸಂಸತ್ತು ಮತ್ತು ನ್ಯಾಯಾಂಗ ಎರಡೂ ಕೆಲಸ ಮಾಡುತ್ತಿವೆ (ಸಮಸ್ಯೆಯಲ್ಲಿ)" ಮಹಿಳೆಯರು ತಮ್ಮ ತಲೆಯನ್ನು ಮುಚ್ಚಿಕೊಳ್ಳಬೇಕೆಂಬ ಕಾನೂನನ್ನು ಬದಲಾಯಿಸುವ ಅಗತ್ಯವಿದೆಯೇ? ಎಂದು ಮೊಂಟಾಜೆರಿ ಹೇಳಿದ ಒಂದು ದಿನದ ನಂತರ ಅವರ ನೈತಿಕ ಪೊಲೀಸ್ ನಿರ್ಮೂಲನೆಯ ಘೋಷಣೆ ಬಂದಿದೆ.

ನೈತಿಕತೆಯ ಪೋಲೀಸ್ -- ಔಪಚಾರಿಕವಾಗಿ ಗಶ್ಟ್-ಇ ಇರ್ಷಾದ್ ಅಥವಾ "ಮಾರ್ಗದರ್ಶನ ಪ್ಯಾಟ್ರೋಲ್" ಎಂದು ಕರೆಯಲ್ಪಡುತ್ತದೆ. ಇರಾನ್ ಅಧ್ಯಕ್ಷ ಮಹಮ್ಮದ್ ಅಹ್ಮದಿನೆಜಾದ್ ಅವರು ಈ "ಮಾರ್ಗದರ್ಶನ ಮತ್ತು ಹಿಜಾಬ್ ಸಂಸ್ಕೃತಿಯನ್ನು ಹರಡಲು" ಕಠಿಣವಾದ ನೈತಿಕತೆಯ ಪೋಲೀಸ್ ಸ್ಥಾಪಿಸಿದ್ದರು. ಇದು ಕಡ್ಡಾಯವಾಗಿ ಸ್ತ್ರೀಯರು ತಲೆಯ ಹೊದಿಕೆಯನ್ನು ತೊಡಲೇಬೇಕು ಎಂದು ಹೇಳುತ್ತದೆ.

2006 ರಲ್ಲಿ ಪ್ರಾರಂಭವಾದ ಈ ಗಸ್ತು ಪಡೆ ಇತ್ತೀಚೆಗೆ ನಿಧನರಾದ ಮಹ್ಸಾ ಅಮಿನಿ ಅವರ ಸಾವಿನ ಬಳಿಕ ವ್ಯಾಪಕ ಜನಾಕ್ರೋಶಕ್ಕೆ ತುತ್ತಾಗಿತ್ತು. ರಾಜಧಾನಿ ಟೆಹ್ರಾನ್‌ನಲ್ಲಿ ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೇ ನೈತಿಕತೆಯ ಪೊಲೀಸರು ಮಹ್ಸಾ ಅಮಿನಿಯನ್ನು ಬಂಧಿಸಿದ್ದರು. ಬಂಧಿಸಿದ ಮೂರು ದಿನಗಳ ನಂತರ, ಸೆಪ್ಟೆಂಬರ್ 16 ರಂದು ಕುರ್ದಿಷ್ ಮೂಲದ 22 ವರ್ಷದ ಮಹ್ಸಾ ಅಮಿನಿ ಸಾವನ್ನಪ್ಪಿದ್ದರು. ಈ ಸಾವಿನ ಬಳಿಕ ಇರಾನ್ ನಾದ್ಯಂತ ವ್ಯಾಪಕ ಗಲಭೆ, ಹಿಜಾಬ್ ವಿರೋಧಿ ಪ್ರತಿಭಟನೆ ನಡೆದಿತ್ತು. ಇರಾನ್ ಮಹಿಳೆಯರು ಹಿಜಾಬ್ ವಿರೋಧಿ ಪ್ರತಿಭಟನಾರ್ಥವಾಗಿ ತಮ್ಮ ತಲೆಕೂದಲುಗಳನ್ನು ಕತ್ತರಿಸಿದ್ದರು. ಈ ಕುರಿತು ವಿಡಿಯೋಗಳು ಜಗತ್ತಿನಾದ್ಯಂತ ವ್ಯಾಪಕ ವೈರಲ್ ಆಗಿದ್ದವು.  

SCROLL FOR NEXT