ವಿದೇಶ

ನಮ್ಮ ಮಿತ್ರ ದೇಶಗಳ ವಿರುದ್ಧ ಚೀನಾ ಹಕ್ಕು ಪ್ರತಿಪಾದನೆ ಮಾಡುತ್ತಿದೆ: ಅಮೇರಿಕಾ ಕಿಡಿ

Srinivas Rao BV

ವಾಷಿಂಗ್ ಟನ್: ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಭಾರತ-ಚೀನಾ ಯೋಧರ ನಡುವಿನ ಸಂಘರ್ಷದ ಬಗ್ಗೆ ಅಮೇರಿಕ ಪ್ರತಿಕ್ರಿಯೆ ನೀಡಿದ್ದು, ಎಲ್ಎಸಿಯಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದೆ.

ಅಮೇರಿಕಾದ ರಕ್ಷಣಾ ಇಲಾಖೆ ಈ ಬಗ್ಗೆ ಮಾತನಾಡಿದ್ದು, ನಮ್ಮ ದೇಶದ ಮಿತ್ರ ರಾಷ್ಟ್ರಗಳ ವಿರುದ್ಧ ಚೀನಾ ಹಕ್ಕು ಪ್ರತಿಪಾದನೆ ಮಾಡುವ ಕೆಲಸ ಮಾಡುತ್ತಿದೆ ಎಂದು ಗುಡುಗಿದೆ.

ಚೀನಾ ಎಲ್ಎಸಿಯಾದ್ಯಂತ ಸೇನಾ ಮೂಲಸೌಕರ್ಯಗಳನ್ನು ನಿರ್ಮಿಸುವ ಕೆಲಸ ಹಾಗೂ ಸೇನಾ ಪಡೆಗಳನ್ನು ನಿಯೋಜಿಸುವ ಕೆಲಸವನ್ನು ಮುಂದುವರೆಸಿದೆ. ಚೀನಾ ಇಂಡೋ ಪೆಸಿಫಿಕ್ ನಲ್ಲಿನ ನಮ್ಮ ಪಾಲುದಾರರು ಹಾಗೂ ಮಿತ್ರ ರಾಷ್ಟ್ರಗಳ ವಿರುದ್ಧದ ಪ್ರತಿಪಾದನೆಯನ್ನು ಹೆಚ್ಚಿಸುತ್ತಿದೆ ಎಂದು ಪೆಂಟಗನ್ ನ ಮಾಧ್ಯಮ ಕಾರ್ಯದರ್ಶಿ ಏರ್ ಫೋರ್ಸ್ ಬ್ರಿಗೇಡಿಯರ್ ಜನರಲ್ ಪ್ಯಾಟ್ ರೈಡರ್ ಹೇಳಿದ್ದಾರೆ.

ತವಾಂಗ್ ನಲ್ಲಿ ನಡೆದ ಡಿ.09 ರ ಘರ್ಷಣೆಯ ಕುರಿತು ಪ್ರತಿಕ್ರಿಯೆ ನೀಡಿರುವ ಅಮೇರಿಕಾ, ಭಾರತದ ದೃಷ್ಟಿಯಿಂದ ನಾವು ಹೇಳುವುದು ಭಿನ್ನವಾಗಿರಬಹುದು ಆದರೆ, ಅಮೇರಿಕಾದ ಮಿತ್ರ ರಾಷ್ಟ್ರಗಳ ವಿರುದ್ಧ ಪಿಆರ್ ಸಿ ತನ್ನ ಹಕ್ಕು ಪ್ರತಿಪಾದನೆಯನ್ನು ಹೆಚ್ಚಿಸುತ್ತಿರುವುದು ಸ್ಪಷ್ಟವಾಗಿದೆ. ನಮ್ಮ ಮಿತ್ರ ರಾಷ್ಟ್ರಗಳ ಭದ್ರತೆಗೆ ನಾವು ಸದಾ ಬದ್ಧರಾಗಿರುತ್ತೇವೆ, ಪರಿಸ್ಥಿತಿಯನ್ನು ತಹಬದಿಗೆ ತರಲು ನಾವು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ರೈಡರ್ ಹೇಳಿದ್ದಾರೆ.
 

SCROLL FOR NEXT