ವಿದೇಶ

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಗೋಟಾಬಯ ಪರಾರಿ ಹಿಂದೆ ನನ್ನ ಪಾತ್ರವಿಲ್ಲ; ಭಾರತ ಸ್ಪಷ್ಟನೆ

Srinivasamurthy VN

ನವದೆಹಲಿ: ಶ್ರೀಲಂಕಾ ಗೋಟಬಯ ರಾಜಪಕ್ಸ ಮಾಲ್ಡೀವ್ಸ್ ಪರಾರಿಯಾಗುವುದರಲ್ಲಿ ತನ್ನ ಯಾವುದೇ ರೀತಿಯ ಪಾತ್ರವಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟನೆ ನೀಡಿದೆ.

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದ ಜನರ ಆಕ್ರೋಶಕ್ಕೆ ತುತ್ತಾಗಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಕುಟುಂಬ ಸಮೇತರಾಗಿ ಮಾಲ್ಡೀವ್ಸ್ ಗೆ ಪರಾರಿಯಾಗಿದ್ದು, 73 ವರ್ಷ ವಯಸ್ಸಿನ ಶ್ರೀಲಂಕಾ ಅಧ್ಯಕ್ಷ ಗೋಟಬಯಾ ಬುಧವಾರ ಮಿಲಿಟರಿ ಜೆಟ್‌ನಲ್ಲಿ ತಮ್ಮ ಪತ್ನಿ ಮತ್ತು ಇಬ್ಬರು ಭದ್ರತಾ ಅಧಿಕಾರಿಗಳೊಂದಿಗೆ ದೇಶವನ್ನು ತೊರೆದಿದ್ದಾರೆ. ಗೋಟಬಯ ಪರಾರಿ ಹಿಂದೆ ಭಾರತದ ಕೈವಾಡವಿದೆ ಎಂಬ ಮಾಧ್ಯಮಗಳ ವರದಿ ಮತ್ತು ಊಹಾಪೋಹಗಳಿಗೆ ಸಂಬಂಧಿಸಿದಂತೆ ಭಾರತ ಖಾರವಾಗಿಯೇ ಪ್ರತಿಕ್ರಿಯೆ ನೀಡಿದೆ.

ಭಾರತದ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಆಧಾರರಹಿತ ಮತ್ತು ಊಹಾಪೋಹ ಎಂದು ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನ್ ಟ್ವೀಟ್ ಮಾಡಿದೆ. 

"ಶ್ರೀಲಂಕಾದಿಂದ ಇತ್ತೀಚೆಗೆ ವರದಿಯಾದ ಗೋಟಬಯ ರಾಜಪಕ್ಸ ಅವರು ದೇಶ ಬಿಟ್ಟು ಮಾಲ್ಡೀವ್ಸ್ ಪರಾರಿಯಾಗಲು ಭಾರತ ನೆರವು ನೀಡಿದೆ ಎಂಬ ಆರೋಪಗಳು ಆಧಾರರಹಿತ ಮತ್ತು ಊಹಾಪೋಹ ಎಂದು ಹೇಳಿದೆ. ಅಲ್ಲದೆ ಪ್ರಜಾಸತ್ತಾತ್ಮಕ ವಿಧಾನಗಳು ಮತ್ತು ಮೌಲ್ಯಗಳು, ಸ್ಥಾಪಿತ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಸಾಂವಿಧಾನಿಕ ಚೌಕಟ್ಟಿನ ಮೂಲಕ ಸಮೃದ್ಧಿ ಮತ್ತು ಪ್ರಗತಿಗಾಗಿ ಅವರ ಆಕಾಂಕ್ಷೆಗಳನ್ನು ಸಾಧಿಸಲು ಪ್ರಯತ್ನಿಸುತ್ತಿರುವ ಶ್ರೀಲಂಕಾದ ಜನರಿಗೆ ಭಾರತವು ಬೆಂಬಲವನ್ನು ಮುಂದುವರಿಸುತ್ತದೆ ಎಂದೂ ಪುನರುಚ್ಚರಿಸಿದೆ ಎಂದು ಟ್ವೀಟ್ ಮಾಡಿದೆ.

ಇದೇ ವಿಚಾರವಾಗಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಸಂಕ್ಷಿಪ್ತ ಹೇಳಿಕೆಯಲ್ಲೂ ಭಾರತೀಯ ರಾಯಭಾರ ಕಚೇರಿ ಇದೇ ಅಂಶಗಳನ್ನು ಪುನರುಚ್ಛರಿಸಿದ್ದು, 'ಶ್ರೀಲಂಕಾದ ವಾಯುಪಡೆಯು ಕಾರ್ಯನಿರ್ವಾಹಕ ಅಧ್ಯಕ್ಷರಿಗೆ ನೀಡಲಾದ ಸಂವಿಧಾನದ ಅಡಿಯಲ್ಲಿ, ರಾಜಪಕ್ಸೆಯನ್ನು ಬುಧವಾರ ಬೆಳಿಗ್ಗೆ ವಾಯುಪಡೆಯ ವಿಮಾನದಲ್ಲಿ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಸರ್ಕಾರದ ಕೋರಿಕೆಯ ಮೇರೆಗೆ ಮತ್ತು ಸಂವಿಧಾನದ ಅಡಿಯಲ್ಲಿ ಅಧ್ಯಕ್ಷರಿಗೆ ಲಭ್ಯವಿರುವ ಅಧಿಕಾರದ ಪ್ರಕಾರ, ರಕ್ಷಣಾ ಸಚಿವಾಲಯದ ಸಂಪೂರ್ಣ ಅನುಮೋದನೆಯೊಂದಿಗೆ, ಅಧ್ಯಕ್ಷರು, ಅವರ ಪತ್ನಿ ಮತ್ತು ಇಬ್ಬರು ಭದ್ರತಾ ಅಧಿಕಾರಿಗಳಿಗೆ ಕಟುನಾಯಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲು ಶ್ರೀಲಂಕಾ ವಾಯುಪಡೆಯ ವಿಮಾನವನ್ನು ಒದಗಿಸಲಾಗಿದೆ. ಜುಲೈ 13 ರ ಮುಂಜಾನೆ ಅವರು ಮಾಲ್ಡೀವ್ಸ್‌ಗೆ ತೆರಳಿದ್ದಾರೆ" ಎಂದು ಹೇಳಿಕೆ ತಿಳಿಸಿದೆ. 

ರಾಜಪಕ್ಸೆ ಅವರು ಅಧ್ಯಕ್ಷರಾಗಿರುವಾಗ ಪ್ರಾಸಿಕ್ಯೂಷನ್‌ನಿಂದ ವಿನಾಯಿತಿ ಪಡೆದಿದ್ದರು. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಂಧನದ ಸಾಧ್ಯತೆಯನ್ನು ತಪ್ಪಿಸಲು ರಾಜೀನಾಮೆ ನೀಡುವ ಮೊದಲೇ ಅವರು ವಿದೇಶಕ್ಕೆ ಪಲಾಯನ ಮಾಡಲು ಬಯಸಿದ್ದರು ಎನ್ನಲಾಗಿದೆ. ಶನಿವಾರ ತಮ್ಮ ಅಧಿಕೃತ ನಿವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದಾಗ ಬುಧವಾರ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಆದರೆ ಇದೀಗ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ತಾವು ಮಾಲ್ಡೀವ್ಸ್ ಪರಾರಿಯಾಗಿದ್ದಾರೆ.  
 

SCROLL FOR NEXT