ವಿದೇಶ

ಬೃಹತ್ ಕೈಗಾರಿಕೆಗಳಿಗೆ ಶೇ.10 ರಷ್ಟು 'ಸೂಪರ್ ತೆರಿಗೆ' ಘೋಷಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್

Lingaraj Badiger

ಇಸ್ಲಾಮಾಬಾದ್: ಸಿಮೆಂಟ್, ಉಕ್ಕು ಮತ್ತು ಆಟೋಮೊಬೈಲ್‌ನಂತಹ ದೊಡ್ಡ ಪ್ರಮಾಣದ ಕೈಗಾರಿಕೆಗಳ ಮೇಲೆ ಶೇಕಡಾ 10 ರಷ್ಟು "ಸೂಪರ್ ಟ್ಯಾಕ್ಸ್" ವಿಧಿಸುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು  ಶುಕ್ರವಾರ ಘೋಷಿಸಿದ್ದಾರೆ. ಹೆಚ್ಚುತ್ತಿರುವ ಹಣದುಬ್ಬರ, ವಿದೇಶಿ ಮೀಸಲು ನಿಧಿಯ ಕೊರತೆ ಮತ್ತು ಸಾಲದ ಹೊರೆ ತಗ್ಗಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ.

ದಿವಾಳಿಯಾಗಿರುವ ಪಾಕಿಸ್ತಾನವನ್ನು ಅಪಾಯದಿಂದ ಪಾರು ಮಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ನಿವ್ವಳ ಲಾಭ ಹೊಂದಿರುವ ವ್ಯಕ್ತಿಗಳು "ಬಡತನ ನಿರ್ಮೂಲನೆ ತೆರಿಗೆ"ಗೆ ಒಳಪಟ್ಟಿರುತ್ತಾರೆ ಎಂದು 2022-23ರ ಮುಂದಿನ ಹಣಕಾಸು ವರ್ಷದ ಫೆಡರಲ್ ಬಜೆಟ್‌ನ ಆರ್ಥಿಕ ತಂಡದ ಸಭೆಯ ನಂತರ ಷರೀಫ್ ತಿಳಿಸಿದ್ದಾರೆ.

ಜನಸಾಮಾನ್ಯರಿಗೆ ಪರಿಹಾರ ಒದಗಿಸುವುದು ಮತ್ತು ಜನರ ಮೇಲಿನ ಹಣದುಬ್ಬರದ ಹೊರೆ ತಗ್ಗಿಸಿ ಅವರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಮೊದಲ ಉದ್ದೇಶವಾಗಿದೆ ಎಂದು ಷರೀಫ್ ಹೇಳಿರುವುದಾಗಿ ಜಿಯೋ ಟಿವಿ ವರದಿ ಮಾಡಿದೆ.

"ದೇಶವನ್ನು ದಿವಾಳಿಯಾಗದಂತೆ ರಕ್ಷಿಸುವುದು ನಮ್ಮ ಎರಡನೇ ಉದ್ದೇಶವಾಗಿದೆ" ಎಂದಿರುವ ಪಾಕ್ ಪ್ರಧಾನಿ, ಹಿಂದಿನ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ "ಅಸಮರ್ಥತೆ ಮತ್ತು ಭ್ರಷ್ಟಾಚಾರ" ದಿಂದಾಗಿ ದೇಶ ಸಂಪೂರ್ಣ ನಾಶವಾಗಿದೆ ಎಂದು ಆರೋಪಿಸಿದ್ದಾರೆ.

ಸಿಮೆಂಟ್, ಉಕ್ಕು, ಸಕ್ಕರೆ, ತೈಲ ಮತ್ತು ಅನಿಲ, ರಸಗೊಬ್ಬರಗಳು, ಎಲ್‌ಎನ್‌ಜಿ ಟರ್ಮಿನಲ್‌ಗಳು, ಜವಳಿ, ಬ್ಯಾಂಕಿಂಗ್, ಆಟೋಮೊಬೈಲ್, ಸಿಗರೇಟ್, ಪಾನೀಯಗಳು ಮತ್ತು ರಾಸಾಯನಿಕ ಕೈಗಾರಿಕೆಗಳು ಈ "ಸೂಪರ್ ತೆರಿಗೆ"ಗೆ ಒಳಪಡುತ್ತವೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

SCROLL FOR NEXT