ವಿದೇಶ

ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ಸಿತ್ರಾಂಗ್ ಚಂಡಮಾರುತ; 16 ಮಂದಿ ಸಾವು, ಲಕ್ಷಾಂತರ ಜನರ ಸ್ಥಳಾಂತರ

Ramyashree GN

ಕೌಕಟಾ: ಬಾಂಗ್ಲಾದೇಶಕ್ಕೆ ಸಿತ್ರಾಂಗ್ ಚಂಡಮಾರುತ ಅಪ್ಪಳಿಸಿದ್ದು, ಕನಿಷ್ಠ 16 ಮಂದಿ ಸಾವಿಗೀಡಾಗಿದ್ದು, ಸುಮಾರು ಒಂದು ಮಿಲಿಯನ್ ಜನರನ್ನು ಅವರ ಮನೆಗಳಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

15 ಕರಾವಳಿ ಜಿಲ್ಲೆಗಳಲ್ಲಿ ಸುಮಾರು 10 ಮಿಲಿಯನ್ ಜನರು ವಿದ್ಯುತ್ ಇಲ್ಲದೆ ಪರದಾಡುತ್ತಿದ್ದು, ದಕ್ಷಿಣ ಮತ್ತು ನೈಋತ್ಯ ಪ್ರದೇಶಗಳಲ್ಲಿ ಶಾಲೆಗಳನ್ನು ಮುಚ್ಚಲಾಯಿತು.

ಅಟ್ಲಾಂಟಿಕ್‌ನಲ್ಲಿನ ಚಂಡಮಾರುತಗಳು ಅಥವಾ ಪೆಸಿಫಿಕ್‌ನಲ್ಲಿ ಟೈಫೂನ್‌ಗಳಿಂದಾಗುವ ಚಂಡಮಾರುತ ಸಾಮಾನ್ಯ. ಆದರೆ, ಹವಾಮಾನ ಬದಲಾವಣೆಯು ಅವುಗಳನ್ನು ಹೆಚ್ಚು ತೀವ್ರವಾಗಿ ಮತ್ತು ಆಗಾಗ್ಗೆ ಉಂಟುಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಸಿತ್ರಾಂಗ್ ಚಂಡಮಾರುತದಿಂದಾಗಿ ಸೋಮವಾರ ತಡರಾತ್ರಿ ದಕ್ಷಿಣ ಬಾಂಗ್ಲಾದೇಶದಲ್ಲಿ ಭೂಕುಸಿತ ಉಂಟಾಯಿತು. ಆದರೆ, ಇದಕ್ಕೂ ಮೊದಲೇ ಆ ಪ್ರದೇಶದಲ್ಲಿನ ಸುಮಾರು 1 ಮಿಲಿಯನ್ ಜನರನ್ನು ಅಧಿಕಾರಿಗಳು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.

ಸರ್ಕಾರಿ ಅಧಿಕಾರಿ ಜೆಬುನ್ ನಹರ್ ಮಾತನಾಡಿ, 14 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಹೆಚ್ಚಿನ ಜನರು ಮರಗಳು ಬಿದ್ದು ಮತ್ತು ಉತ್ತರದಲ್ಲಿ ಜಮುನಾ ನದಿಯಲ್ಲಿ ದೋಣಿ ಮುಳುಗಿ ಇಬ್ಬರು ಸಾವಿಗೀಡಾಗಿದ್ದಾರೆ. ಸದ್ಯ ಹಾನಿಯ ವರದಿ ಲಭ್ಯವಾಗಿಲ್ಲ ಎಂದು ಸುದ್ದಿಸಂಸ್ಥೆ ಎಎಫ್‌ಬಿಗೆ ತಿಳಿಸಿದ್ದಾರೆ.

ದ್ವೀಪಗಳು ಮತ್ತು ನದಿ ತಟದಂತಹ ತಗ್ಗು ಪ್ರದೇಶಗಳಿಂದ ಸಾವಿರಾರು ಜನರನ್ನು ಸುರಕ್ಷಿತವಾಗಿ ಸೈಕ್ಲೋನ್ ಶೆಲ್ಟರ್‌ಗಳಿಗೆ ಸ್ಥಳಾಂತರಿಸಲಾಗಿದೆ. ಜನರು ರಾತ್ರಿಯಿಡೀ ಪರಿಹಾರ ಕೇಂದ್ರಗಳಲ್ಲಿದ್ದರು ಮತ್ತು ಇಂದು ಬೆಳಗ್ಗೆ ಅನೇಕರು ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದಾರೆ ಎಂದು ವಿಪತ್ತು ನಿರ್ವಹಣಾ ಸಚಿವಾಲಯದ ಕಾರ್ಯದರ್ಶಿ ಕಮರುಲ್ ಅಹ್ಸಾನ್ ಎಎಫ್‌ಪಿಗೆ ತಿಳಿಸಿದ್ದಾರೆ.

ಕೆಲವು ಸಂದರ್ಭಗಳಲ್ಲಿ ತಮ್ಮ ಮನೆಗಳನ್ನು ತ್ಯಜಿಸಲು ಒಪ್ಪದ ಗ್ರಾಮಸ್ಥರನ್ನು ಬಲವಂತದಿಂದ ಸ್ಥಳಾಂತರಿಸಬೇಕಾಯಿತು. ಚಂಡಮಾರುತದ ಕೇಂದ್ರಬಿಂದುವಿನಿಂದ ನೂರಾರು ಕಿಮೀ ದೂರದಲ್ಲಿರುವ ರಾಜಧಾನಿ ಢಾಕಾದವರೆಗೆ ಮರಗಳು ಉರುಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಸೋಮವಾರ ಪ್ರವಾಹ ಪೀಡಿತ ಪ್ರದೇಶಗಳಾದ ಢಾಕಾ, ಖುಲ್ನಾ ಮತ್ತು ಬಾರಿಸಾಲ್‌ನಂತಹ ನಗರಗಳಲ್ಲಿ 324 ಮಿಲಿಮೀಟರ್‌ಗಳಷ್ಟು ಮಳೆ ಸುರಿದಿದೆ.

ಮ್ಯಾನ್ಮಾರ್‌ನ ಸುಮಾರು 33,000 ರೋಹಿಂಗ್ಯಾ ನಿರಾಶ್ರಿತರು, ವಿವಾದಾತ್ಮಕವಾಗಿ ಬಂಗಾಳ ಕೊಲ್ಲಿಯ ಚಂಡಮಾರುತ ಪೀಡಿತ ದ್ವೀಪಕ್ಕೆ ಸ್ಥಳಾಂತರಗೊಂಡಿದ್ದಾರೆ. ಅವರು ಮನೆಯೊಳಗೆ ಇರುವಂತೆ ಆದೇಶಿಸಲಾಗಿದೆ. ಸದ್ಯ ಯಾವುದೇ ಸಾವುನೋವು ಅಥವಾ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೀತಿ ಮತ್ತು ಹಾವುಗಳು

ದಕ್ಷಿಣ ದ್ವೀಪವಾದ ಮಹೇಶ್ಖಾಲಿಯಲ್ಲಿ ಚಂಡಮಾರುತದಿಂದಾಗಿ ಅನೇಕ ಮರಗಳು ಧರೆಗುರುಳಿವೆ ಮತ್ತು ವಿದ್ಯುತ್ ಮತ್ತು ಟೆಲಿಕಾಂ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.

'ಇಂತಹ ಚಂಡಮಾರುತದಿಂದಾಗಿ ನಮ್ಮ ಮನೆಗಳು ನಾಶವಾಗುತ್ತವೆ ಎಂಬ ಭಯದಿಂದ ನಾವು ರಾತ್ರಿಯಲ್ಲಿ ಮಲಗಲು ಸಾಧ್ಯವಾಗಲಿಲ್ಲ. ಅನೇಕ ಮನೆಗಳಿಗೆ ಹಾವುಗಳು ನುಗ್ಗಿವೆ. ಅನೇಕ ಮನೆಗಳಿಗೆ ನೀರು ನುಗ್ಗಿದೆ' ಎಂದು ಮಹೇಶಖಾಲಿ ನಿವಾಸಿ ತಹಮಿದುಲ್ ಇಸ್ಲಾಂ (25) ಹೇಳಿದರು.

ಅತಿ ಹೆಚ್ಚು ಬಾಧಿತವಾದ ಬಾರಿಸಲ್ ಪ್ರದೇಶದಲ್ಲಿ ಭಾರಿ ಮಳೆ ಮತ್ತು ಗಾಳಿಯು ತರಕಾರಿ ತೋಟಗಳಿಗೆ ಹಾನಿಯನ್ನುಂಟುಮಾಡಿದೆ ಎಂದು ಪ್ರಾದೇಶಿಕ ಜಿಲ್ಲಾ ಆಡಳಿತಾಧಿಕಾರಿ ಅಮಿನುಲ್ ಅಹ್ಸಾನ್ ಎಎಫ್‌ಪಿಗೆ ತಿಳಿಸಿದರು.

ನೆರೆಯ ಪೂರ್ವ ಭಾರತದ ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ, ಸೋಮವಾರ ಸಾವಿರಾರು ಜನರನ್ನು 100ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಆದರೆ, ಯಾವುದೇ ಹಾನಿಯಾದ ಬಗ್ಗೆ ವರದಿಗಳಿಲ್ಲ ಮತ್ತು ಜನರು ಮಂಗಳವಾರ ಮನೆಗೆ ಮರಳುತ್ತಿದ್ದಾರೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT