ವಿದೇಶ

ಪಾಕಿಸ್ತಾನ: ಇಮ್ರಾನ್ ಖಾನ್ ಜಾಥಾದಲ್ಲಿ ಭಾಗವಹಿಸುವವರಿಗೆ ವಸತಿ ಒದಗಿಸದಂತೆ ಹೋಟೆಲ್‌ಗಳಿಗೆ  ಇಸ್ಲಾಮಾಬಾದ್ ಪೊಲೀಸರ ಸೂಚನೆ

Manjula VN

ಲಾಹೋರ್: ದೇಶದಲ್ಲಿ ತಕ್ಷಣ ಚುನಾವಣೆ ನಡೆಸಬೇಕೆಂದು ಆಗ್ರಹಿಸಿ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ದೀರ್ಘ ಜಾಥಾ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಜಾಥಾದಲ್ಲಿ ಭಾಗವಹಿಸುವವರಿಗೆ ವಸತಿ ಒದಗಿಸದಂತೆ ಹೋಟೆಲ್ ಹಾಗೂ ಅತಿಥಿ ಗೃಹಗಳಿಗೆ ಇಸ್ಲಾಮಾಬಾದ್ ಪೊಲೀಸರು ಸೂಚನೆ ನೀಡಿದ್ದಾರೆ. 

ಪೊಲೀಸರಷ್ಟೇ ಅಲ್ಲದೆ, ಪಾಕಿಸ್ತಾನದ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ (ಪಿಇಎಂಆರ್'ಎ) ಕೂಡ ಅಕ್ಟೋಬರ್ 28 ರಂದು ಅಧಿಸೂಚನೆಯ ಹೊರಡಿಸಿದ್ದು, ಪಿಟಿಐ ನಾಯಕರ ಭಾಷಣಗಳು ಮತ್ತು ದೀರ್ಘ ಜಾಥಾವನ್ನು  ನೇರ ಪ್ರಸಾರ ಮಾಡದಂತೆ ದೂರದರ್ಶನ ಚಾನೆಲ್‌ಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿದುಬಂದಿದೆ. 

ಜಾಥಾ ವೇಳೆ ಪಿಟಿಐ ನಾಯಕರು ದೇಶದ ವಿರುದ್ಧ ನೀಡಿದ್ದ ಹೇಳಿಕೆಗಳನ್ನು ನೇರ ಪ್ರಸಾರ ಮಾಡಲಾಗಿದ್ದು, ಇದು ನೀತಿ ಸಂಹಿತೆ ಮತ್ತು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತಾಗಿದೆ. ಹೀಗಾಗಿ ನಿಯಮಗಳನ್ನು ಪಾಲಿಸದ ಚಾನೆಲ್ ಗಳ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದೆ. 

ಲಾಹೋರ್ನಿಂದ ಇಸ್ಲಾಮಾಬಾದ್ ವರೆಗೆ ಸುಮಾರು 380 ಕಿ.ಮೀ ದೂರ ಈ ದೀರ್ಘ ಜಾಥಾ ನಡೆಯಲಿದ್ದು, ಜಾಥಾಗೆ ಇಮ್ರಾನ್ ಖಾನ್ ಅವರು ಶುಕ್ರವಾರ ಚಾಲನೆ ನೀಡಿದ್ದರು. ಜಾಥಾದಲ್ಲಿ ಇಮ್ರಾನ್ ಅವರ ಪಕ್ಷದ ಸದಸ್ಯರು, ಬೆಂಬಲಿಗರು ಪಾಲ್ಗೊಂಡಿದ್ದಾರೆ. 

ದಾರಿಯ ಹಲವೆಡೆ ಸಭೆ, ಪ್ರತಿಭಟನೆ ನಡೆಸುವ ಮೂಲಕ ಹಾಲಿ ಸರಕಾರದ ವೈಫಲ್ಯಗಳನ್ನು ಜನತೆಯ ಮುಂದಿಡಲಾಗುವುದು. ದೇಶದ ಹಣವನ್ನು ಲೂಟಿ ಮಾಡುತ್ತಿರುವವರಿಂದ ದೇಶವನ್ನು ರಕ್ಷಿಸಬೇಕಾಗಿದೆ ಎಂದು ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಹೇಳಿಕೆ ತಿಳಿಸಿದೆ.

ನಾನು ಬಂಧನಕ್ಕೆ ಹೆದರುವವನಲ್ಲ. ಜನತೆ ನ್ಯಾಯ ಮತ್ತು ಮುಕ್ತರೀತಿಯ ಚುನಾವಣೆಯನ್ನು ಬಯಸುತ್ತಿದ್ದಾರೆ. ಜನರ ಆಗ್ರಹಕ್ಕೆ ನಾವು ಧ್ವನಿಯಾಗುತ್ತಿದ್ದೇವೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. 

ಈ ಮಧ್ಯೆ, ಜಾಥಾದ ಹಿನ್ನೆಲೆಯಲ್ಲಿ ರಾಜಧಾನಿ ಇಸ್ಲಮಾಬಾದ್ನಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ.

SCROLL FOR NEXT