ವಿದೇಶ

ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ: ಭೂಕುಸಿತದಲ್ಲಿ ಕನಿಷ್ಠ 17 ಮಂದಿ ಸಾವು

Srinivasamurthy VN

ಕಠ್ಮಂಡು: ನೇಪಾಳದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಈ ವರೆಗೂ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ನೇಪಾಳದ ಪಶ್ಚಿಮ ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಪರಿಣಾಮ ಹಲವು ಕಡೆ ಭೂಕುಸಿತ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ಭೂಕುಸಿತದ ಕಾರಣಗಳಿಂದಾಗಿ ಕನಿಷ್ಠ 17 ಮಂದಿ ಸಾವಿಗೀಡಾಗಿದ್ದಾರೆ ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳದ ಪಶ್ಚಿಮ ಭಾಗದ ಸುದುರ್ಪಶ್ಚಿಮ್ ಪ್ರಾಂತ್ಯದ ಅಚಾಮ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ, ಇದು ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಉಂಟಾದ ಪ್ರವಾಹದಿಂದ ತೀವ್ರವಾಗಿ ಪ್ರಭಾವಿತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಹಂಗಾಮಿ ಮುಖ್ಯ ಜಿಲ್ಲಾ ಅಧಿಕಾರಿ ದೀಪೇಶ್ ರಿಜಾಲ್ ಅವರು, ರಾಜಧಾನಿ ಕಠ್ಮಂಡುವಿನ ಪಶ್ಚಿಮಕ್ಕೆ ಸುಮಾರು 450 ಕಿಮೀ ದೂರದ(281 ಮೈಲುಗಳು) ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದು, ದುರ್ಘಟನೆಯಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಹನ್ನೊಂದು ಜನರನ್ನು ಚಿಕಿತ್ಸೆಗಾಗಿ ಸುರ್ಖೇತ್ ಜಿಲ್ಲೆಗೆ ವಿಮಾನದಲ್ಲಿ ರವಾನಿಸಲಾಗಿದೆ. ಭೂಕುಸಿತದಲ್ಲಿ ಮೂವರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ನೇಪಾಳ ಪೊಲೀಸ್ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿದ್ದು, ನಾಪತ್ತೆಯಾದವರ ಹುಡುಕಾಟದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ದುರಂತದ ಕಾರಣದಿಂದ ಈ ಪ್ರಾಂತ್ಯದ ಏಳು ಜಿಲ್ಲೆಗಳನ್ನು ಸಂಪರ್ಕಿಸುವ ಭೀಮದತ್ತ ಹೆದ್ದಾರಿ ಕೂಡ ಅಸ್ತವ್ಯಸ್ತಗೊಂಡಿದೆ. ಘಟನೆಗಳಿಂದಾಗಿ ಅಚ್ಚಮ್‌ನಲ್ಲಿ ಸಂವಹನ ಸೇವೆಯ ಮೇಲೂ ಪರಿಣಾಮ ಬೀರಿದೆ ಎಂದು ಮಾಹಿತಿ ನೀಡಿದ್ದಾರೆ.

ನೇಪಾಳದ ಪರ್ವತ ಪ್ರದೇಶಗಳಲ್ಲಿ ವಿಶೇಷವಾಗಿ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಪ್ರವಾಹಗಳು ಮತ್ತು ಭೂಕುಸಿತಗಳು ಆಗಾಗ್ಗೆ ಸಂಭವಿಸುತ್ತವೆ.
 

SCROLL FOR NEXT