ವಿದೇಶ

ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್, ನವಾಜ್ ಷರೀಫ್ ವಿರುದ್ಧ ವಾಗ್ದಾಳಿ

Ramyashree GN

ಇಸ್ಲಾಮಾಬಾದ್: ಭ್ರಷ್ಟಾಚಾರದ ವಿಚಾರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಶ್ಲಾಘಿಸಿದ್ದಾರೆ. ಇದೇ ವೇಳೆ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಮುಖ್ಯಸ್ಥ ನವಾಜ್ ಷರೀಫ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಾಜಿ ಪ್ರಧಾನಿ ಖಾನ್, ಪಾಕಿಸ್ತಾನದ ಹೊರಗೆ (ವಿದೇಶಗಳು) ನವಾಜ್ ಷರೀಫ್ ಹೊಂದಿರುವ ಆಸ್ತಿಗಳ ಬಗ್ಗೆ ಮಾತನಾಡುತ್ತಿರುವುದು ಕಂಡುಬಂದಿದೆ. ನವಾಜ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ‘ವಿಶ್ವದಲ್ಲಿ ನವಾಜ್ ಹೊರತು ಪಡಿಸಿ ಬೇರೆ ಯಾವ ನಾಯಕರಿಗೂ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಇಲ್ಲ’ ಎಂದು ದೂರಿದ್ದಾರೆ.

'ಯಾವುದೇ ಪ್ರಧಾನಿ ಅಥವಾ ನಾಯಕ ದೇಶದ ಹೊರಗೆ ಅಂದರೆ ವಿದೇಶಗಳಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಹೊಂದಿರುವ ಬಗ್ಗೆ ಯಾರ ಬಗ್ಗೆಯಾದರೂ ಹೇಳಿ. ನಮ್ಮ ನೆರೆಯ ದೇಶದಲ್ಲಿಯೂ ಸಹ, ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಹೊರಗೆ ಎಷ್ಟು ಆಸ್ತಿ ಹೊಂದಿದ್ದಾರೆ?. ನವಾಜ್ ವಿದೇಶದಲ್ಲಿ ಎಷ್ಟು ಆಸ್ತಿ ಮತ್ತು ಆಸ್ತಿ ಹೊಂದಿದ್ದಾರೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ' ಎಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಹೇಳಿದರು.

ಇಮ್ರಾನ್ ಖಾನ್ ಭಾರತವನ್ನು ಹೊಗಳಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದರು.

ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತವನ್ನು ಶ್ಲಾಘಿಸಿದ ಇಮ್ರಾನ್ ಖಾನ್, ಅವರ ಸರ್ಕಾರವು ಸ್ವತಂತ್ರ ವಿದೇಶಾಂಗ ನೀತಿಯ ಸಹಾಯದಿಂದ ಉತ್ತಮವಾಗಿ ಕೆಲಸ ಮಾಡುತ್ತಿದೆ. ಆದರೆ, ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ನೇತೃತ್ವದ ಸರ್ಕಾರವು 'ಆರ್ಥಿಕತೆ ಬಗ್ಗೆ ಯಾವುದೇ ನಿಯಂತ್ರಣವಿಲ್ಲದೆ ತಲೆಯಿಲ್ಲದ ಕೋಳಿಯಂತೆ ಓಡುತ್ತಿದೆ' ಎಂದು ಟೀಕಿಸಿದ್ದರು.

'ಕ್ವಾಡ್‌ನ ಭಾಗವಾಗಿದ್ದ ಭಾರತವು ಅಮೆರಿಕದಿಂದ ಒತ್ತಡವನ್ನು ಎದುರಿಸಿತು. ಹೀಗಿದ್ದರೂ, ತನ್ನ ದೇಶದ ಜನಸಾಮಾನ್ಯರಿಗೆ ಸಮಸ್ಯೆಯಾಗುವುದನ್ನು ತಡೆಯಲು ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲವನ್ನು ಖರೀದಿಸಿತು. ಸ್ವತಂತ್ರ ವಿದೇಶಾಂಗ ನೀತಿಯ ಸಹಾಯದಿಂದ ನಮ್ಮ ಸರ್ಕಾರವು ಇದೇ ರೀತಿಯ ಕೆಲಸವನ್ನು ಮಾಡಬೇಕಿತ್ತು' ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ. ಜೊತೆಗೆ, ಭಾರತದಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಕಡಿತದ ಬಗ್ಗೆ ಒಂದು ತುಣುಕನ್ನು ಹಂಚಿಕೊಂಡಿದ್ದರು.

ಈ ಹಿಂದೆ, ಏಪ್ರಿಲ್‌ನಲ್ಲಿಯೂ ಸಹ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥರಾಗಿರುವ ಇಮ್ರಾನ್ ಖಾನ್ ಭಾರತವನ್ನು 'ಬಹಳ ಸ್ವಾಭಿಮಾನಿ ಜನರು' ಎಂದು ಶ್ಲಾಘಿಸಿದರು ಮತ್ತು ಯಾವುದೇ ಮಹಾಶಕ್ತಿಯು ನೆರೆಯ ದೇಶಕ್ಕೆ ಷರತ್ತುಗಳನ್ನು ವಿಧಿಸಲು  ಸಾಧ್ಯವಿಲ್ಲ ಎಂದು ಹೇಳಿದ್ದರು.

'ನಾವು ಮತ್ತು ಭಾರತವು ಒಟ್ಟಿಗೆ ನಮ್ಮ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದೇವೆ. ಆದರೆ, ಪಾಕಿಸ್ತಾನವನ್ನು ಟಿಶ್ಯೂ ಪೇಪರ್ ಆಗಿ ಬಳಸಲಾಗಿದೆ ಮತ್ತು ಎಸೆಯಲಾಗುತ್ತದೆ. ನಾನು ಅಮೆರಿಕದ ವಿರೋಧಿ ಅಲ್ಲ, ಆದರೆ, ವಿದೇಶಿ ಪಿತೂರಿಯು 'ನಮ್ಮ ಸಾರ್ವಭೌಮತ್ವದ ಮೇಲಿನ ದಾಳಿ' ಎಂದು ಹೇಳಿದರು.

SCROLL FOR NEXT