ವಿದೇಶ

ಇರಾನ್‌ ಹಿಜಾಬ್ ವಿರೋಧಿ ಪ್ರತಿಭಟನೆ ವೇಳೆ ವ್ಯಕ್ತಿ ಸಾವು, ಸಮಾಧಿ ಮೇಲೆ ಕೂದಲು ಕತ್ತರಿಸಿ ಹಾಕಿ ಸಹೋದರಿ ಆಕ್ರೋಶ

Srinivasamurthy VN

ಟೆಹ್ರಾನ್: ಇರಾನ್‌ನಲ್ಲಿ ಭುಗಿಲೆದ್ದಿರುವ ಹಿಜಾಬ್ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ಪ್ರತಿಭಟನೆ ವೇಳೆ ಸಾವನ್ನಪ್ಪಿದ ವ್ಯಕ್ತಿ ಸಮಾಧಿ ಮೇಲೆ ಆತನ ಸಹೋದರಿ ತನ್ನ ಕೂದಲು ಕತ್ತರಿಸಿ ಹಾಕುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹಿಜಾಬ್ ವಿರೋಧಿ ಪ್ರತಿಭಟನೆ ವೇಳೆ 41 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 700 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಈ ಹಿಂದೆ ಇದೇ ಪ್ರತಿಭಟನೆಯ ವೇಳೆ ಜವಾದ್ ಹೇದರಿ ಎಂಬಾತ ಸಾವನ್ನಪ್ಪಿದ. ಇದೀಗ ಆತನ ಅಂತ್ಯ ಸಂಸ್ಕಾರ ನಡೆಸಲಾಗಿದ್ದು, ಇದೇ ವ್ಯಕ್ತಿಯ ಸಮಾಧಿ ಮೇಲೆ ಆತನ ಸಹೋದರಿ ಪ್ರತಿಭಟನೆಯ ರೂಪವಾಗಿ ತನ್ನದೇ ಕೂದಲು ಕತ್ತರಿಸಿ ಹಾಕುತ್ತಿರುವ ವಿಡಿಯೋ ವ್ಯಾಪಕವಾಗಿ ವೈರಲ್‌ ಆಗುತ್ತಿದೆ.

22 ವರ್ಷದ ಮಹ್ಸಾ ಅಮಿನಿ ಸಾರ್ವಜನಿಕವಾಗಿ ಹಿಜಾಬ್ ಧರಿಸದಿದ್ದಕ್ಕಾಗಿ ಆಕೆಯನ್ನು ಇರಾನ್‌ನ ನೈತಿಕತೆ ಪೋಲೀಸರು ಬಂಧಿಸಿದ್ದರು. ಕಸ್ಟಡಿಯಲ್ಲಿದ್ದಾಗ ತೀವ್ರ ಹಿಂಸೆಗೊಳಗಾದ ಅಮಿನಿ ಬಳಿಕ ಸಾವನ್ನಪ್ಪಿದ್ದರು. ಈ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ತಿರುಗಿದೆ. 

ಇಲ್ಲಿ ವೈರಲ್‌ ಆಗಿರುವ ವೀಡಿಯೊದಲ್ಲಿ, ಜಾವದ್ ಹೇದರಿ ಅವರ ಸಮಾಧಿಯ ಮೇಲೆ ದುಃಖಿತರಾದ ಮಹಿಳೆಯರು ಹೂಗಳನ್ನು ಎಸೆಯುತ್ತಿರುವುದು, ಆತನ ಸಹೋದರಿ ತನ್ನ ತಲೆ ಕೂದಲು ಕತ್ತರಿಸಿ ಹಾಕುತ್ತಿರುವುದನ್ನು ನೋಡಬಹುದು. ಸರ್ಕಾರಿ ವಿರೋಧಿ ಮೇಲ್ವಿಚಾರಣಾ ಗುಂಪು 1500 ತಸ್ವಿರ್ ಪೋಸ್ಟ್ ಮಾಡಿದ ಈ ವೀಡಿಯೊದಲ್ಲಿ, ಮಹ್ಸಾ_ಅಮಿನಿಯ ಹತ್ಯೆಯ ವಿರುದ್ಧದ ಪ್ರತಿಭಟನೆಯ ಬಲಿಪಶುಗಳಲ್ಲಿ ಒಬ್ಬರಾದ ಜಾವದ್ ಹೇದರಿಯ ಸಹೋದರಿ ತನ್ನ ಸಹೋದರನ ಅಂತ್ಯಕ್ರಿಯೆಯಲ್ಲಿ ತನ್ನ ಕೂದಲನ್ನು ಕತ್ತರಿಸಿ ಸಮಾದಿ ಮೇಲೆ ಹಾಕುತ್ತಿದ್ದಾಳೆ ಎಂದು ಶೀರ್ಷಿಕೆಯಲ್ಲಿ ಹೇಳಲಾಗಿದೆ.

ಇರಾನ್‌ನ ಮಾಧ್ಯಮಗಳ ಪ್ರಕಾರ, ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಈ ವರೆಗೂ ಪೊಲೀಸರು ಸೇರಿದಂತೆ ಕನಿಷ್ಠ 41 ಜನರು ಸಾವನ್ನಪ್ಪಿದ್ದಾರೆ. ಆದರೆ ಮಾನವ ಹಕ್ಕುಗಳ ಗುಂಪುಗಳು ನಿಜವಾದ ಸಾವಿನ ಸಂಖ್ಯೆ ಇನ್ನೂ ಹೆಚ್ಚು ಎಂದು ಹೇಳುತ್ತವೆ. ಪ್ರತಿಭಟನೆಗಳ ವಿರುದ್ಧದ ಹೋರಾಟವು ಪ್ರತಿಭಟನಾಕಾರರ ವಿರುದ್ಧ ಲೈವ್ ಮದ್ದುಗುಂಡುಗಳ ಬಳಕೆ ಮತ್ತು ಇಂಟರ್ನೆಟ್ ನಿರ್ಬಂಧಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ. 

SCROLL FOR NEXT