ವಿದೇಶ

ಪಾಕಿಸ್ತಾನದ ಮಾಜಿ ಅಧ್ಯಕ್ಷ 79 ವರ್ಷದ ಪರ್ವೇಜ್ ಮುಷರಫ್ ನಿಧನ

Ramyashree GN

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅದ್ಯಕ್ಷ, ಮಾಜಿ ಸೇನಾ ಮುಖ್ಯಸ್ಥ ಜನರಲ್ 1999ರ ಕಾರ್ಗಿಲ್ ಯುದ್ಧದ ವಾಸ್ತುಶಿಲ್ಪಿ ಪರ್ವೇಜ್ ಮುಷರಫ್ ಅವರು ಭಾನುವಾರ ದುಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

79 ವರ್ಷದ ಮುಷರಫ್ ಅವರು ಅಮಿಲಾಯ್ಡೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಇದು ದೇಹದಾದ್ಯಂತ ಅಂಗಗಳು ಮತ್ತು ಅಂಗಾಂಶಗಳಲ್ಲಿ ಅಮಿಲಾಯ್ಡ್ ಎಂಬ ಅಸಹಜ ಪ್ರೊಟೀನ್ ಸಂಗ್ರಹವಾಗುವುದರಿಂದ ಉಂಟಾಗುವ ಅಪರೂಪದ ಕಾಯಿಲೆಯಾಗಿದೆ.

ದುಬೈನ ಅಮೆರಿಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜನರಲ್ (ನಿವೃತ್ತ) ಮುಷರಫ್ ಅವರು ನಿಧನರಾಗಿರುವುದಾಗಿ ಅವರ ಕುಟುಂಬದ ಹೇಳಿಕೆಯನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ವರದಿ ಮಾಡಿದೆ.

2016 ರಿಂದ ದುಬೈನಲ್ಲಿ ವಾಸಿಸುತ್ತಿದ್ದ ಮುಷರಫ್ ಭಾನುವಾರ ಕೊನೆಯುಸಿರೆಳೆದರು. ಆಗಿನ ಪ್ರಧಾನಿ ನವಾಜ್ ಷರೀಫ್ ಅವರು ಲಾಹೋರ್‌ನಲ್ಲಿ ತಮ್ಮ ಭಾರತದ ಸಹವರ್ತಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ತಿಂಗಳ ನಂತರ ನಡೆದ ಕಾರ್ಗಿಲ್ ಯುದ್ಧದ ಮುಖ್ಯ ವಾಸ್ತುಶಿಲ್ಪಿ ಆಗಿದ್ದರು ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ಹೇಳಿದೆ.

ಕಾರ್ಗಿಲ್‌ನಲ್ಲಿ ವಿಫಲವಾದ ದುಸ್ಸಾಹಸದ ನಂತರ, ಮುಷರಫ್ 1999ರಲ್ಲಿ ರಕ್ತರಹಿತ ದಂಗೆಯಲ್ಲಿ ಆಗಿನ ಪ್ರಧಾನಿ ಷರೀಫ್ ಅವರನ್ನು ಪದಚ್ಯುತಗೊಳಿಸಿದರು ಮತ್ತು 1999 ರಿಂದ 2008 ರವರೆಗೆ ವಿವಿಧ ಹುದ್ದೆಗಳಲ್ಲಿ ಮೊದಲು ಪಾಕಿಸ್ತಾನದ ಮುಖ್ಯ ಕಾರ್ಯನಿರ್ವಾಹಕರಾಗಿ ಮತ್ತು ನಂತರ ಅಧ್ಯಕ್ಷರಾಗಿ ಪಾಕಿಸ್ತಾನವನ್ನು ಆಳಿದರು. 

2007ರ ನವೆಂಬರ್ 3 ಸಂವಿಧಾನವನ್ನು ಅಮಾನತುಗೊಳಿಸಿದ್ದಕ್ಕಾಗಿ 2014ರ ಮಾರ್ಚ್‌ನಲ್ಲಿ ಮುಷರಫ್ ಅವರ ವಿರುದ್ಧ ದೋಷಾರೋಪಣೆ ಮಾಡಲಾಯಿತು.

2019ರ ಡಿಸೆಂಬರ್‌ನಲ್ಲಿ ವಿಶೇಷ ನ್ಯಾಯಾಲಯವು ಮುಷರಫ್ ಅವರ ವಿರುದ್ಧದ ದೇಶದ್ರೋಹದ ಪ್ರಕರಣದಲ್ಲಿ ಮರಣದಂಡನೆ ವಿಧಿಸಿತು.

2016ರ ಮಾರ್ಚ್ ತಿಂಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ದುಬೈಗೆ ದೇಶವನ್ನು ತೊರೆದರು.

ಮುಷರಫ್ ಅವರು 1943ರ ಆಗಸ್ಟ್ 11 ರಂದು ದೆಹಲಿಯಲ್ಲಿ ಜನಿಸಿದರು. ಅವರ ಕುಟುಂಬವು 1947 ರಲ್ಲಿ ನವದೆಹಲಿಯಿಂದ ಕರಾಚಿಗೆ ಸ್ಥಳಾಂತರಗೊಂಡಿತು.

ಅವರು 1964 ರಲ್ಲಿ ಪಾಕಿಸ್ತಾನದ ಸೇನೆಗೆ ಸೇರಿದರು ಮತ್ತು ಕ್ವೆಟ್ಟಾದ ಸೇನಾ ಸಿಬ್ಬಂದಿ ಮತ್ತು ಕಮಾಂಡ್ ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದರು

SCROLL FOR NEXT