ವಿದೇಶ

23 ಟನ್ ಪರಿಹಾರ ಸಾಮಾಗ್ರಿಯೊಂದಿಗೆ ಭೂಕಂಪ ಪೀಡಿತ ಸಿರಿಯಾ ತಲುಪಿದ ಭಾರತದ ಏಳನೇ ವಿಮಾನ!

Nagaraja AB

ಟರ್ಕಿ: ಶತಮಾನದಲ್ಲಿಯೇ ಅತ್ಯಂತ ವಿನಾಶಕಾರಿ ಭೂಕಂಪಕ್ಕೆ ಸಿಲುಕಿ ತತ್ತರಿಸಿರುವ ಟರ್ಕಿ ಹಾಗೂ ಸಿರಿಯಾ ದೇಶಕ್ಕೆ ಭಾರತ ನೆರವಿನ ಹಸ್ತ ಚಾಚಿಸಿದೆ. ಆಪರೇಷನ್ ದೋಸ್ತ್ ಹೆಸರಿನಲ್ಲಿ ವೈದ್ಯಕೀಯ ಹಾಗೂ ಪರಿಹಾರ ಸಾಮಾಗ್ರಿಗಳನ್ನು ಟರ್ಕಿಗೆ ಭಾರತ ತಲುಪಿಸಿದೆ.

23 ಟನ್ ಪರಿಹಾರ ಸಾಮಾಗ್ರಿ ಹೊತ್ತ ಭಾರತದ ಏಳನೇ ವಿಮಾನ ಅದಾನ ವಿಮಾನ ನಿಲ್ದಾಣ ತಲುಪಿದ್ದು, ಸ್ಥಳೀಯ ಉಪ ಆಡಳಿತಾಧಿಕಾರಿ ಮೌತಾಜ್ ದೌಹುಜಿ ಡಮಾಸ್ಕಸ್ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಿದ್ದಾರೆ. ಈ ವಿಷಯವನ್ನು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಏಳನೇ ಆಪರೇಷನ್ ದೋಸ್ತ್ ವಿಮಾನ ಶನಿವಾರ ಉತ್ತರ ಪ್ರದೇಶದ ಗಾಜಿಯಾಬಾದ್ ನ ಹಿಂದನ್ ವಾಯುನೆಲೆಯಿಂದ ಭೂಕಂಪ ಪೀಡಿತ ಸಿರಿಯಾ ಮತ್ತು ಟರ್ಕಿಗೆ ನಿರ್ಗಮಿಸಿತ್ತು. ಭಾರತೀಯ ವಾಯುಪಡೆಯ ಸಿ 17 ವಿಮಾನದಲ್ಲಿ ಪರಿಹಾರ ಸಾಮಾಗ್ರಿಗಳು, ವೈದ್ಯಕೀಯ ನೆರವು, ತುರ್ತು ಆರೈಕೆ ಮೆಡಿಸನ್, ವೈದ್ಯಕೀಯ ಉಪಕರಣಗಳನ್ನು ಸಾಗಿಸಲಾಯಿತು.

ಸಿರಿಯಾಕ್ಕೆ 23 ಟನ್ ಹಾಗೂ ಟರ್ಕಿಗೆ 12 ಟನ್ ಸೇರಿದಂತೆ ಒಟ್ಟಾರೇ 35 ಟನ್ ಪರಿಹಾರ ಸಾಮಾಗ್ರಿ ಸಾಗಿಸಲಾಗಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
 

SCROLL FOR NEXT