ವಿದೇಶ

ಬ್ರೆಜಿಲ್: ವಿಶ್ವದ ದೊಡ್ಡ ಏಸು ಪ್ರತಿಮೆಗೆ ಬಡಿದ ಸಿಡಿಲು, ಫೋಟೋ ವೈರಲ್!

Manjula VN

ಬ್ರಿಸಿಲಿಯ: ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿರುವ ಬ್ರೆಜಿಲ್'ನ ರಿಯೋ ಡಿ ಜನೈರೋದ ಮೇಲಿರುವ ಪ್ರಪಂಚದ ಅತಿ ದೊಡ್ಡ ಏಸುಕ್ರಿಸ್ತನ ಪ್ರತಿಮೆಗೆ ಸಿಡಿಲು ಬಡಿದಿದ್ದು, ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಶುಕ್ರವಾರ ಬ್ರೆಜಿಲ್ ಕರಾವಳಿಗೆ ಫ್ಲ್ಯಾಶ್ ಚಂಡಮಾರುತ ಅಪ್ಪಳಿಸಿದ ಸಮಯದಲ್ಲಿ ಈ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. 100 ಅಡಿ ಎತ್ತರದ ಏಸು ಕ್ರಿಸ್ತನ ಮೂರ್ತಿಯ ತಲೆಯಿಂದ ಆಕಾಶಕ್ಕೆ ಸಂಪರ್ಕ ಹೊಂದಿರುವಂತೆ ಸಿಡಿಲು ಬಡಿದ ದೃಶ್ಯ ಸೆರೆಯಾಗಿದ್ದು, ಇದು ದೈವಿಕ ದೃಶ್ಯ ಎಂಬಂತೆ ಭಾಸವಾಗಿದೆ.

ಇದರಿಂದ ಮೂರ್ತಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಈ ದೃಶ್ಯವನ್ನು ಫರ್ನಾಂಡೋ ಬ್ರಾಗಾ ಎಂಬುವವರು ಸೆರೆ ಹಿಡಿದಿದ್ದು, ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಡಿವೈನ್ ಲೈಟಿಂಗ್ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರಿಯೊ ಡಿ ಜನೈರೊದಲ್ಲಿನ ಏಸು ಕ್ರಿಸ್ತನ ಪ್ರತಿಮೆಯನ್ನು ಫ್ರೆಂಚ್ ಶಿಲ್ಪಿ ಪಾಲ್ ಲ್ಯಾಂಡೋವ್ಸ್ಕಿ ಅವರು ನಿರ್ಮಿಸಿದ್ದಾರೆ. ಬ್ರೆಜಿಲಿಯನ್ ಎಂಜಿನಿಯರ್ ಹೀಟರ್ ಡಾ ಸಿಲ್ವಾ ಕೋಸ್ಟಾ ಅವರು ಫ್ರೆಂಚ್ ಎಂಜಿನಿಯರ್ ಆಲ್ಬರ್ಟ್ ಕಾಕೋಟ್ ಅವರ ಸಹಯೋಗದೊಂದಿಗೆ ಇದನ್ನು ನಿರ್ಮಿಸಿದ್ದಾರೆ. ಪ್ರತಿಮೆಯನ್ನು 1922 ಮತ್ತು 1931ರ ನಡುವೆ ನಿರ್ಮಿಸಲಾಗಿದೆ. 30 ಮೀಟರ್ ಎತ್ತರವಿದೆ. ಇದು ಕಾಂಕ್ರೀಟ್ ಮತ್ತು ಸೋಪ್ ಸ್ಟೋನ್ ನಿಂದ ಮಾಡಲ್ಪಟ್ಟಿದೆ. ಈ ಪ್ರತಿಮೆ ಟಿಜುಕಾ ರಾಷ್ಟ್ರೀಯ ಉದ್ಯಾನವನದಲ್ಲಿ 700-ಮೀಟರ್ ಕೊರ್ಕೊವಾಡೊ ಪರ್ವತದ ಶಿಖರದಲ್ಲಿದೆ. ಇದು ವಿಶ್ವದ ಅತ್ಯಂತ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾಗಿದೆ.

SCROLL FOR NEXT