ವಿದೇಶ

ನೇಪಾಳದಲ್ಲಿ ವಿಮಾನ ಅಪಘಾತ: ಐವರು ಭಾರತೀಯರು ಸೇರಿದಂತೆ 68 ಪ್ರಯಾಣಿಕರ ದುರ್ಮರಣ

Nagaraja AB

ಕಠ್ಮಂಡು: 72 ಜನರಿದ್ದ ನೇಪಾಳದ ಪ್ರಯಾಣಿಕ ವಿಮಾನ ಭಾನುವಾರ ಪೋಖರಾ ವಿಮಾನ ನಿಲ್ದಾಣದಲ್ಲಿ  ಲ್ಯಾಂಡಿಂಗ್ ಆಗುವಾಗ ನದಿಯ ದಡದಲ್ಲಿ ಪತನಗೊಂಡಿದ್ದು, 68 ಮಂದಿ ಪ್ರಯಾಣಿಕರು ದುರ್ಮರಣ ಹೊಂದಿದ್ದಾರೆ. ಇವರಲ್ಲಿ ಐವರು ಭಾರತೀಯರು ಸೇರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ಯೇತಿ ಏರ್‌ಲೈನ್ಸ್‌ನ (9N-ANC ATR-72) ವಿಮಾನ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10:33 ಕ್ಕೆ ಟೇಕ್ ಆಫ್ ಆಗಿತ್ತು. ಪೋಖರಾ ಹಿಮಾಲಯ ರಾಷ್ಟ್ರದ ಪ್ರಮುಖ ಪ್ರವಾಸಿ ತಾಣವಾಗಿದೆ.

ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ನದಿಯ ದಡದಲ್ಲಿ ವಿಮಾನ ಪತನಗೊಂಡಿದೆ. ಒಟ್ಟು 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಗಳಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಪ್ರಯಾಣಿಕರಲ್ಲಿ 10 ವಿದೇಶಿಗರು ಸೇರಿದ್ದಾರೆ ಎಂದು ನೇಪಾಳದ ಸರ್ಕಾರಿ ಟೆಲಿವಿಷನ್ ವರದಿ ಮಾಡಿದೆ. ವಿಮಾನ ಪತನಕ್ಕೀಡಾದ ಸ್ಥಳದಿಂದ ಕನಿಷ್ಠ 68 ಮೃತದೇಹಗಳನ್ನು ಹೊರತೆಗೆಯಲಾಗಿದೆ. ವಿಮಾನದಲ್ಲಿದ್ದ ಒಟ್ಟು 15 ವಿದೇಶಿ ಪ್ರಜೆಗಳಲ್ಲಿ ಐವರು ಭಾರತೀಯರು ಸೇರಿದ್ದಾರೆ ಎಂದು ವರದಿಯಾಗಿದೆ.

ಮೃತರಲ್ಲಿ ನಾಲ್ವರು ರಷ್ಯಾದ ಪ್ರಜೆಗಳು, ಇಬ್ಬರು ಕೊರಿಯನ್ ಹಾಗೂ ಆಸ್ಟ್ರೇಲಿಯಾ, ಐರಿಶ್, ಅರ್ಜೆಂಟೈನಾ, ಫ್ರೆಂಚ್ ನ ಒಬ್ಬರು ಸೇರಿದ್ದಾರೆ ಎನ್ನಲಾಗಿದೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ನೇಪಾಳದ ಸಚಿವ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಅಪಘಾತದ ನಂತರ ಸಚಿವ ಸಂಪುಟದ ತುರ್ತು ಸಭೆಯನ್ನು ಕರೆದಿದ್ದಾರೆ. ಅಪಘಾತದ ಬಗ್ಗೆ ಅವರು ದುಃಖ ವ್ಯಕ್ತಪಡಿಸಿದ್ದು, ಗೃಹ ಸಚಿವಾಲಯ, ಭದ್ರತಾ ಸಿಬ್ಬಂದಿ ಮತ್ತು ಎಲ್ಲಾ ಸರ್ಕಾರಿ ಸಂಸ್ಥೆಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಈ ಹಿಂದೆ ಮೇ 29 ರಂದು ನೇಪಾಳದ ಪರ್ವತ ಪ್ರದೇಶವಾದ ಮುಸ್ತಾಂಗ್ ಜಿಲ್ಲೆಯಲ್ಲಿ ತಾರಾ ಏರ್ ವಿಮಾನವು ಪತನಗೊಂಡಿದ್ದರಿಂದ ಭಾರತೀಯ ಕುಟುಂಬದ ನಾಲ್ವರು ಸೇರಿದಂತೆ ಎಲ್ಲಾ 22 ಜನರು ಸಾವನ್ನಪ್ಪಿದರು. 2016 ರಲ್ಲಿ, ಅದೇ ಮಾರ್ಗದಲ್ಲಿ ಹಾರಾಟ ನಡೆಸುತ್ತಿದ್ದ ಅದೇ ವಿಮಾನಯಾನ ಸಂಸ್ಥೆಯ ವಿಮಾನವು ಟೇಕ್ಆಫ್ ಆದ ನಂತರ ಅಪಘಾತಕ್ಕೀಡಾಗಿ ಎಲ್ಲಾ 23 ಜನರು ಸಾವನ್ನಪ್ಪಿದರು.

ಮಾರ್ಚ್ 2018 ರಲ್ಲಿ, ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕ-ಬಾಂಗ್ಲಾ ವಿಮಾನ ಮಾರ್ಗದ ಅಪಘಾತ ಸಂಭವಿಸಿತ್ತು. ಅದರಲ್ಲಿ 51 ಜನರು ಸಾವನ್ನಪ್ಪಿದರು. 

SCROLL FOR NEXT