ವಿದೇಶ

5 ದಿನಗಳಲ್ಲಿ ಆಸ್ಟ್ರೇಲಿಯಾದಲ್ಲಿ ಮತ್ತೊಂದು ಹಿಂದೂ ದೇವಾಲಯ ಧ್ವಂಸ: ಖಲಿಸ್ತಾನಿ ಬೆಂಬಲಿಗರ ಕುಕೃತ್ಯ

Sumana Upadhyaya

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಮತ್ತೊಂದು ಹಿಂದೂ ದೇವಾಲಯವನ್ನು ಧ್ವಂಸ ಮಾಡಲಾಗಿದೆ. "ಖಾಲಿಸ್ತಾನಿ ಬೆಂಬಲಿಗರು" ಭಾರತ ವಿರೋಧಿ ಗೀಚುಬರಹಗಳನ್ನು ಬರೆದು ಆಸ್ಟ್ರೇಲಿಯಾದ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ, ಒಂದು ವಾರದೊಳಗೆ ವಿಕ್ಟೋರಿಯಾ ರಾಜ್ಯದ ದೇವಾಲಯದ ಮೇಲೆ ಇದು ಎರಡನೇ ದಾಳಿಯಾಗಿದೆ. 

ವಿಕ್ಟೋರಿಯಾದ ಕ್ಯಾರಮ್ ಡೌನ್ಸ್‌ನಲ್ಲಿರುವ ಐತಿಹಾಸಿಕ ಶಿವ ವಿಷ್ಣು ದೇವಾಲಯವನ್ನು ಧ್ವಂಸ ಮಾಡಲಾಗಿದೆ ಎಂದು ಆಸ್ಟ್ರೇಲಿಯಾ ಟುಡೇ ವೆಬ್‌ಸೈಟ್ ವರದಿ ಮಾಡಿದೆ. ತಮಿಳು ಹಿಂದೂ ಸಮುದಾಯದಿಂದ ಮೂರು ದಿನಗಳ ಕಾಲ ನಡೆಯುವ 'ತೈ ಪೊಂಗಲ್' ಹಬ್ಬವನ್ನು ಭಕ್ತರು 'ದರ್ಶನ'ಕ್ಕೆಂದು ಬಂದಾಗ ಈ ವಿಧ್ವಂಸಕ ಕೃತ್ಯ ಗಮನಕ್ಕೆ ಬಂದಿದೆ.

ಶಿವ ವಿಷ್ಣು ದೇವಾಲಯದ ದೀರ್ಘಕಾಲದ ಭಕ್ತೆ ಉಷಾ ಸೆಂಥಿಲ್ನಾಥನ್, "ನಾವು ಆಸ್ಟ್ರೇಲಿಯಾದಲ್ಲಿ ತಮಿಳು ಅಲ್ಪಸಂಖ್ಯಾತ ಗುಂಪುಗಳಾಗಿಬಿಟ್ಟಿದ್ದೇವೆ. ಇಲ್ಲಿ ಧಾರ್ಮಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಬಹಳಷ್ಟು ಕಷ್ಟವಾಗುತ್ತಿದೆ ಎಂದರು. 

ಇಲ್ಲಿಗೆ ನಾವು ಪ್ರಾರ್ಥನೆ ಸಲ್ಲಿಸಲು, ಪೂಜೆ ಮಾಡಲು ಬರುತ್ತೇವೆ. ಖಲಿಸ್ತಾನ್ ಬೆಂಬಲಿಗರು ಯಾವುದೇ ಭಯವಿಲ್ಲದೆ ತಮ್ಮ ದ್ವೇಷದ ಸಂದೇಶಗಳ ಮೂಲಕ ಅದನ್ನು ಧ್ವಂಸಗೊಳಿಸುತ್ತಿದ್ದಾರೆ. ವಿಕ್ಟೋರಿಯನ್ನು ಹೆದರಿಸಲು ಪ್ರಯತ್ನಿಸುತ್ತಿರುವ ಈ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಪ್ರೀಮಿಯರ್ ಡಾನ್ ಆಂಡ್ರ್ಯೂಸ್ ಮತ್ತು ವಿಕ್ಟೋರಿಯಾ ಪೊಲೀಸರನ್ನು ಒತ್ತಾಯಿಸುತ್ತೇನೆ ಎಂದು ಇಲ್ಲಿನ ಹಿಂದೂ ಸಮುದಾಯದ ಪ್ರತಿನಿಧಿ ಮಹಿಳೆಯೊಬ್ಬರು ಹೇಳುತ್ತಾರೆ. 

ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾದ ವಿಕ್ಟೋರಿಯಾ ಅಧ್ಯಾಯದ ಅಧ್ಯಕ್ಷ ಮಕರಂದ್ ಭಾಗವತ್, "ಖಾಲಿಸ್ತಾನ್ ಪ್ರಚಾರಕ್ಕಾಗಿ ಎರಡನೇ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ. ನಮ್ಮ ದೇವಾಲಯಗಳ ವಿಧ್ವಂಸಕತೆಯು ಶೋಚನೀಯವಾಗಿದೆ, ಇದನ್ನು ಹಿಂದೂ ಸಮಾಜ ಸಹಿಸಿಕೊಳ್ಳಬಾರದು ಎಂದಿದ್ದಾರೆ. 

ಮೆಲ್ಬೋರ್ನ್ ಹಿಂದೂ ಸಮುದಾಯದ ಸದಸ್ಯ ಸಚಿನ್ ಮಹಾತೆ, ಖಲಿಸ್ತಾನ್ ಬೆಂಬಲಿಗರಿಗೆ ಧೈರ್ಯವಿದ್ದರೆ ಅವರು ಶಾಂತಿಯುತ ಹಿಂದೂ ಸಮುದಾಯಗಳ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸುವ ಬದಲು ವಿಕ್ಟೋರಿಯನ್ ಸಂಸತ್ತಿನ ಕಟ್ಟಡದ ಮೇಲೆ ಗೀಚುಬರಹ ಬರೆಯಲಿ ನೋಡೋಣ ಎಂದಿದ್ದಾರೆ. 

ಮೊನ್ನೆ ಜನವರಿ 12 ರಂದು, ಮೆಲ್ಬೋರ್ನ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವನ್ನು ಭಾರತ ವಿರೋಧಿ ಗೀಚುಬರಹದೊಂದಿಗೆ 'ಸಮಾಜ ವಿರೋಧಿಗಳು' ಧ್ವಂಸಗೊಳಿಸಿದ್ದರು.

SCROLL FOR NEXT