ವಿದೇಶ

Disney LayOffs: ಡಿಸ್ನಿಗೂ ತಟ್ಟಿದ ಆರ್ಥಿಕ ಹಿಂಜರಿತದ ಬಿಸಿ; 4 ದಿನದಲ್ಲಿ 7,000 ಉದ್ಯೋಗಿಗಳು ವಜಾ

Srinivasamurthy VN

ವಾಷಿಂಗ್ಟನ್: ಆರ್ಥಿಕ ಹಿಂಜರಿತದಿಂದ ತತ್ತರಿಸಿ ಹೋಗಿರುವ ವಿಶ್ವದಾದ್ಯಂತ ಅನೇಕ ಕಂಪನಿಗಳು ವೆಚ್ಚ ಕಡಿತ ಹಾಗೂ ಇತರ ಕಾರಣಗಳನ್ನು ನೀಡಿ ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿದ್ದು, ಈ ಪಟ್ಟಿಗೆ ಇದೀಗ ಖ್ಯಾತ ಮನರಂಜನಾ ಸಂಸ್ಥೆ ಡಿಸ್ನಿ ಕೂಡ ಸೇರ್ಪಡೆಯಾಗಿದೆ.

ಡಿಸ್ನಿ (Disney) ಕೂಡಾ ತನ್ನ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಲು ಮುಂದಾಗಿದ್ದು, ಸುಮಾರು 7,000 ಉದ್ಯೋಗಿಗಳ ವಜಾಕ್ಕೆ ಮುಂದಾಗಿದೆ. ಕೇವಲ 4 ದಿನಗಳ ಅಂತರದಲ್ಲಿ ಡಿಸ್ನಿ ಸುಮಾರು 7 ಸಾವಿರ ಸಿಬ್ಬಂದಿಗಳನ್ನು ವಜಾಕ್ಕೆ ಮುಂದಾಗಿದೆ. 

ಕಂಪನಿ ಸುಮಾರು 5.5 ಬಿಲಿಯನ್ ಡಾಲರ್ ವೆಚ್ಚ ಕಡಿತ ಮಾಡುವ ಸಲುವಾಗಿ ಮೊದಲ ಸುತ್ತಿನ ವಜಾವನ್ನು ಕಾರ್ಯಗತಗೊಳಿಸಲು ಮುಂದಾಗಿದೆ. ಇದು ಈ ವಾರದಲ್ಲಿ ಜಾರಿಗೆ ಬರಲಿದ್ದು, ಸುಮಾರು 7,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ. ಮೊದಲ ಸುತ್ತಿನ ವಜಾ ಪ್ರಕ್ರಿಯೆ ಈ ವಾರದ ಒಳಗಾಗಿ ನಡೆಯಲಿದ್ದು, ಬಳಿಕ ಏಪ್ರಿಲ್‌ನಲ್ಲಿ ಇನ್ನೂ ಹೆಚ್ಚಿನ ಉದ್ಯೋಗಿಗಳನ್ನು ತೆಗೆದುಹಾಕಲಾಗುತ್ತದೆ ಎಂದು ಕಂಪನಿ ತನ್ನ ಉದ್ಯೋಗಿಗಳಿಗೆ ಕಳುಹಿಸಿದ ಮೆಮೋದಲ್ಲಿ ತಿಳಿಸಲಾಗಿದೆ. 

ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಬ್ ಇಗರ್ ಸೋಮವಾರ ಸಿಬ್ಬಂದಿಗೆ ಮೆಮೊ ಕಳುಹಿಸಿದ್ದು, ಎರಡನೇ ದೊಡ್ಡ ವಜಾ ಪ್ರಕ್ರಿಯೆ ಏಪ್ರಿಲ್‌ನಲ್ಲಿ ಸಂಭವಿಸುತ್ತದೆ, ಇದು ಹಲವಾರು ಸಾವಿರ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ, ಡಿಸ್ನಿ ಎಂಟರ್ಟೈನ್ಮೆಂಟ್, ಡಿಸ್ನಿ ಪಾರ್ಕ್ಸ್, ಡಿಸ್ನಿ ಎಕ್ಸ್ ಪೀರಿಯನ್ಸ್ ಹಾಗೂ ಡಿಸ್ನಿ ಪ್ರಾಡಕ್ಟ್ಸ್, ಡಿಸ್ನಿ ಕಾರ್ಪೊರೇಟ್ ಸೇರಿದಂತೆ ಸಂಸ್ಥೆಯ ಹಲವು ಪ್ರಮುಖ ವಿಭಾಗಗಳಲ್ಲಿ ಮೇಲೆ ಈ ವಜಾ ಪ್ರಕ್ರಿಯೆ ಪರಿಣಾಮ ಬೀರಲಿದೆ. 

ಸದ್ಯ ಈ ಬಾರಿ ಇಎಸ್‌ಪಿಎನ್‌ನ ಉದ್ಯೋಗಿಗಳ ಮೇಲೆ ಇದು ಪ್ರಭಾವ ಬೀರುವುದಿಲ್ಲ ಎನ್ನಲಾಗಿದ್ದು, ಮುಂದಿನ ವಜಾ ಪ್ರಕ್ರಿಯೆಗಳಲ್ಲಿ ಅಲ್ಲಿನ ಉದ್ಯೋಗಿಗಳನ್ನೂ ಕಡಿತಗೊಳಿಸಲಾಗುತ್ತದೆ ಎಂದು ಊಹಿಸಲಾಗಿದೆ.

SCROLL FOR NEXT