ವಿದೇಶ

ಹಮಾಸ್ ದಾಳಿಯಲ್ಲಿ ಭಾರತೀಯ ಮೂಲದ ಇಬ್ಬರು ಇಸ್ರೇಲಿ ಮಹಿಳಾ ಪೊಲೀಸರ ಸಾವು

Nagaraja AB

ಇಸ್ರೇಲ್: ಈ ತಿಂಗಳ ಆರಂಭದಲ್ಲಿ ಪ್ಯಾಲೇಸ್ತೈನ್ ಉಗ್ರಗಾಮಿ ಗುಂಪು ಹಮಾಸ್ ನಡೆಸಿದ ದಾಳಿಯಲ್ಲಿ ಭಾರತೀಯ ಮೂಲದ  ಇಬ್ಬರು ಇಸ್ರೇಲಿ ಮಹಿಳಾ ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು  ಭಾನುವಾರ ಖಚಿತಪಡಿಸಿವೆ.

ಅಶ್ಡೋಡ್‌ ಹೋಮ್ ಫ್ರೆಂಟ್ ಕಮಾಂಡ್ ನ  22 ವರ್ಷದ ಲೆಫ್ಟಿನೆಂಟ್ ಕಮಾಂಡರ್ ಓರ್ ಮೋಸೆಸ್ ಮತ್ತು ಪೊಲೀಸ್ ಸೆಂಟ್ರಲ್ ಡಿಸ್ಟ್ರಿಕ್ಟ್‌ ಬಾರ್ಡರ್ ನ ಪೊಲೀಸ್ ಅಧಿಕಾರಿ ಇನ್ಸ್‌ಪೆಕ್ಟರ್ ಕಿಮ್ ಡೋಕ್ರಾಕರ್ ಅಕ್ಟೋಬರ್ 7 ರಂದು ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ.

ಅವರಿಬ್ಬರೂ ಯುದ್ಧದ ಕರ್ತವ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತದೆ. ಇದುವರೆಗೆ 286 ಸೇನಾ ಯೋಧರು ಮತ್ತು 51 ಪೊಲೀಸ್ ಅಧಿಕಾರಿಗಳು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ ಎಂದು  ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. 

ದಾಳಿಯಲ್ಲಿ ಮೃತಪಟ್ಟವರ ಗುರುತನ್ನು ದೃಢೀಕರಿಸಲು ಮತ್ತು ಕಾಣೆಯಾದ ಅಥವಾ ಬಹುಶಃ ಅಪಹರಣಕ್ಕೊಳಗಾದವರ ಹುಡುಕಾಟವನ್ನು ಇಸ್ರೇಲ್  ಮುಂದುವರೆಸುತ್ತಿರುವುದರಿಂದ ಇನ್ನೂ ಹಲವು ಮಂದಿ ಸಾವನ್ನಪ್ಪಿರಬಹುದೆಂದು ಕೆಲ ಸಮುದಾಯದ ಸದಸ್ಯರು ತಿಳಿಸಿದ್ದಾರೆ. 

ದಾಳಿಯಲ್ಲಿ ಗಾಯಗೊಂಡಿರುವ ಕೇರಳದ ಆರೈಕೆದಾರ ಶೀಜಾ ಆನಂದ್ ಈಗ ಸ್ಥಿರವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಕ್ಟೋಬರ್ 7 ರಂದು ಉತ್ತರ ಇಸ್ರೇಲಿ ನಗರವಾದ ಅಶ್ಕೆಲೋನ್‌ನಲ್ಲಿ ನಡೆದ ರಾಕೆಟ್ ದಾಳಿಯಲ್ಲಿ ಅವರ ಕೈ ಮತ್ತು ಕಾಲಿಗೆ ಗಾಯಗಳಾಗಿತ್ತು. ಕೂಡಲೇ ಆಕೆಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

SCROLL FOR NEXT