ವಿದೇಶ

4 ವರ್ಷ ವನವಾಸದ ನಂತರ ಮತ್ತೆ ಪಾಕಿಸ್ತಾನಕ್ಕೆ ಮರಳಿದ ಮಾಜಿ ಪ್ರಧಾನಿ ನವಾಜ್ ಷರೀಫ್

Lingaraj Badiger

ಇಸ್ಲಾಮಾಬಾದ್: ಮೂರು ಬಾರಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ನಾಲ್ಕು ವರ್ಷಗಳ ನಂತರ ದುಬೈನಿಂದ ವಿಶೇಷ ವಿಮಾನದಲ್ಲಿ ಶನಿವಾರ ಸ್ವದೇಶಕ್ಕೆ ಮರಳಿದ್ದಾರೆ.

ಜನವರಿಯಲ್ಲಿ ಪಾಕಿಸ್ತಾನ ಸಂಸತ್ ಚುನಾವಣೆ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಮತದಾರರ ಬೆಂಬಲ ಪಡೆಯಲು ನವಾಜ್ ಷರೀಫ್ ಇಂದು ಇಸ್ಲಾಮಾಬಾದ್ ಗೆ ಆಗಮಿಸಿದ್ದಾರೆ. ಇದರೊಂದಿಗೆ ಅವರ ನಾಲ್ಕು ವರ್ಷಗಳ ಸ್ವಯಂ-ಘೋಷಿತ ಗಡಿಪಾರು ಕೊನೆಗೊಂಡಿದೆ.

ಸ್ವದೇಶಕ್ಕೆ ವಾಪಸ್ ಆಗಿರುವ ಷರೀಫ್ ಅವರು ಲಾಹೋರ್‌ನಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಪಾಕಿಸ್ತಾನ ತೀವ್ರ ರಾಜಕೀಯ ಪ್ರಕ್ಷುಬ್ಧತೆ ಮತ್ತು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲೇ ಮಾಜಿ ಪ್ರಧಾನಿ ದೇಶಕ್ಕೆ ವಾಪಸ್ ಆಗಿದ್ದಾರೆ.

"ನಾನು ನಾಲ್ಕು ವರ್ಷಗಳ ನಂತರ ಇಂದು ಪಾಕಿಸ್ತಾನಕ್ಕೆ ಹೋಗುತ್ತಿದ್ದೇನೆ ಮತ್ತು ಅಲ್ಲಾನ ಕೃಪೆಯಿಂದ ನಾನು ತುಂಬಾ ಸಂತೋಷವಾಗಿದ್ದೇನೆ" ಎಂದು ಷರೀಫ್ ದುಬೈನಿಂದ ಇಸ್ಲಾಮಾಬಾದ್‌ಗೆ ಹೊರಡುವ ಮೊದಲು ಸುದ್ದಿಗಾರರಿಗೆ ತಿಳಿಸಿದ್ದಾರೆ.

2019 ರಲ್ಲಿ ಪಾಕಿಸ್ತಾನ ತೊರೆದಿದ್ದ ನವಾಜ್ ಷರೀಫ್ ಅವರು ಲಂಡನ್ ನಲ್ಲಿ ನೆಲೆಸಿದ್ದರು. ಕಳೆದ ವಾರ ಲಂಡನ್ ನಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಆಗಮಿಸಿದ್ದರು.

SCROLL FOR NEXT