ಢಾಕಾ: ಶೇಖ್ ಹಸೀನಾ ಪದಚ್ಯುತಿಯ ನಂತರ ಬಾಂಗ್ಲಾದಲ್ಲಿ ಆರ್ಥಿಕ ತಜ್ಞ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ಇಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ.
ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಯೂನಸ್ ಪದಗ್ರಹಣ ಮಾಡಿದ್ದು, ಸಂವಿಧಾನವನ್ನು ರಕ್ಷಿಸಿ ಬೆಂಬಲಿಸುವುದಾಗಿ ಯೂನಸ್ ಪದಗ್ರಹಣದಲ್ಲಿ ಶಪಥ ಸ್ವೀಕರಿಸಿದರು.
ಬಾಂಗ್ಲಾ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು ಮೊಮ್ಮಕ್ಕಳಿಗೆ ಮೀಸಲಾತಿ ಘೋಷಿಸಿದ್ದ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಬಾಂಗ್ಲಾದಲ್ಲಿ ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡು ಹಿಂಸಾಚಾರಕ್ಕೆ ತಿರುಗಿ, ಶೇಖ್ ಹಸೀನಾ ಸೋಮವಾರದಂದು ರಾಜೀನಾಮೆ ನೀಡಬೇಕಾಯಿತು.
ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿರುವ 84 ವರ್ಷದ ಯೂನಸ್ ಅವರು ಬಾಂಗ್ಲಾದಲ್ಲಿ ಮೈಕ್ರೀ ಕ್ರೆಡಿಟ್, ಮೈಕ್ರೋಫೈನಾನ್ಸ್ ಪ್ರವರ್ತಕರಾಗಿದ್ದು ತಮ್ಮ ಪರಿಕಲ್ಪನೆಯ ಗ್ರಾಮೀಣ್ ಬ್ಯಾಂಕ್ ಆರ್ಥಿಕತೆ ಮೂಲಕ ಖ್ಯಾತಿ ಗಳಿಸಿದ್ದರು. 2006 ರಲ್ಲಿ ಇವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆತಿದೆ.
ಅನಾರೋಗ್ಯದ ಕಾರಣ ಪ್ಯಾರಿಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೊಹಮ್ಮದ್ ಯೂನಸ್ ಇಂದು ಢಾಕಾಗೆ ವಾಪಸ್ಸಾದರು. ಅವರಿಗೆ ಬಾಂಗ್ಲಾ ರಾಷ್ಟ್ರಪತಿ ಮೊಹಮ್ಮದ್ ಶಬಹುದ್ದೀನ್ ಬಂಗಭವನ್ ನಿವಾಸದಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿರುವ ಯೂನಸ್ ಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಬಾಂಗ್ಲಾದೇಶದಲ್ಲಿ ಸಹಜತೆ ಶೀಘ್ರವಾಗಿ ಮರುಸ್ಥಾಪನೆಯಾಗಲಿದೆ ಎಂಬ ವಿಶ್ವಾಸ ಭಾರತಕ್ಕೆ ಇದೆ. ಅಲ್ಲಿ ಸಹಜ ಸ್ಥಿತಿಗೆ ಎಲ್ಲವೂ ಮರಳಿದರೆ ಹಿಂದೂಗಳೂ ಸೇರಿದಂತೆ ಇತರ ಅಲ್ಪಸಂಖ್ಯಾತರ ರಕ್ಷಣೆಯು ಖಾತ್ರಿಯಾಗಲಿದೆ ಎಂದು ಹೇಳಿದ್ದಾರೆ.
ಯೂನಸ್ ಗೆ 16 ಸದಸ್ಯರ ಸಲಹಾ ಪರಿಷತ್ ಸರ್ಕಾರ ಮುನ್ನಡೆಸಲು ಸಹಾಯ ಮಾಡಲಿದೆ. ಸಲಹೆಗಾರರಲ್ಲಿ ಪೈಕಿ ಹಸೀನಾ ಅವರ ಉಚ್ಚಾಟನೆಗೆ ಕಾರಣವಾದ ಪ್ರತಿಭಟನೆಗಳ ಇಬ್ಬರು ಪ್ರಮುಖ ನಾಯಕರಾದ ನಹಿದ್ ಇಸ್ಲಾಂ ಮತ್ತು ಆಸಿಫ್ ಮಹಮೂದ್ ಇದ್ದಾರೆ.