ಡಮಾಸ್ಕಸ್: ಸಿರಿಯಾದಲ್ಲಿ ಬಂಡಾಯಗಾರರ ಹೋರಾಟಕ್ಕೆ ಮೇಲುಗೈ ಆಗ್ತಿದ್ದಂತೆ ಬಶರ್ ಅಲ್-ಅಸಾದ್ ಪೂರ್ವ ಯೋಜಿತ ರೀತಿಯಲ್ಲಿ ದೇಶದಿಂದ ಪಲಾಯನ ಮಾಡಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಅಸಾದ್, ಸಿರಿಯಾ ತೊರೆಯುವುದಕ್ಕೆ ಯಾವುದೇ ಪ್ಲಾನ್ ಮಾಡಿರಲಿಲ್ಲ. ಉಗ್ರ ಸಂಘಟನೆ ಅಲ್-ಖೈದಾ-ಸಂಯೋಜಿತ ಹಯಾತ್ ತಾಹಿರ್ ಅಲ್-ಶಾಮ್ ಸೇರಿದಂತೆ ಬಂಡಾಯಗಾರರು ಡಮಾಸ್ಕಸ್ ಕಡೆಗೆ ಮುನ್ನಡೆಯುತ್ತಿದ್ದಂತೆ ಅಲ್ಲಿಂದ ತೆರಳುವಂತೆ ರಷ್ಯಾ ಮನವಿ ಮಾಡಿತ್ತು ಎಂದು ಅವರು ತಿಳಿಸಿದ್ದಾರೆ.
ಪಲಾಯನ ಮಾಡಲು ರಷ್ಯಾದ ಗುಪ್ತಚರ ಪಡೆ ಅನುಕೂಲ ಮಾಡಿಕೊಟ್ಟಿತು. ರಷ್ಯಾದ ವಿಮಾನದ ಮೂಲಕ ಅಸಾದ್ ಅವರನ್ನು ಕರೆದೊಯ್ಯಲಾಗಿದ್ದು, ಅವರು ರಷ್ಯಾದಲ್ಲಿಯೇ ಆಶ್ರಯ ಪಡೆದಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡುತ್ತಿದ್ದಂತೆಯೇ, ಮಾನವೀಯ ಆಧಾರದಲ್ಲಿ ಅವರಿಗೆ ಆಶ್ರಯ ನೀಡಲಾಗಿದೆ ಎಂದು ರಷ್ಯಾದ ಅಧಿಕೃತ ಮೂಲಗಳು ಖಚಿತಪಡಿಸಿವೆ.
ಒಂದು ವಾರದ ಹಿಂದೆ ಡಮಾಸ್ಕಸ್ ಬಂಡುಕೋರರ ಹಿಡಿತಕ್ಕೆ ಸಿಕ್ಕ ನಂತರ ದೇಶ ತೊರೆಯುವ ಯಾವುದೇ ಯೋಜನೆ ಇರಲಿಲ್ಲ ಆದರೆ ಪಶ್ಚಿಮ ಸಿರಿಯಾದಲ್ಲಿ ತಮ್ಮ ನೆಲೆಯು ದಾಳಿಗೆ ಒಳಗಾದ ನಂತರ ನನ್ನನ್ನು ರಷ್ಯಾದ ಮಿಲಿಟರಿ ಸ್ಥಳಾಂತರಿಸಿದೆ ಎಂದು ಪದಚ್ಯುತ ಸಿರಿಯಾದ ಅಧ್ಯಕ್ಷ ಬಶರ್ ಅಸ್ಸಾದ್ ಹೇಳಿದ್ದಾರೆ. ಬಂಡುಕೋರ ಗುಂಪುಗಳು ಅವರನ್ನು ಪದಚ್ಯುತಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಅಸಾದ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಬಂಡುಕೋರರು ರಾಜಧಾನಿಗೆ ಲಗ್ಗೆಹಾಕಿದ ಕೆಲವು ಗಂಟೆಗಳ ನಂತರ ಡಿಸೆಂಬರ್ 8 ರ ಬೆಳಿಗ್ಗೆ ಡಮಾಸ್ಕಸ್‌ನಿಂದ ತೆರಳಿದ್ದಾಗಿ ಅಸ್ಸಾದ್ ತಮ್ಮ ಫೇಸ್‌ಬುಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರು ರಷ್ಯಾದ ಮಿತ್ರರಾಷ್ಟ್ರಗಳ ಸಮನ್ವಯದೊಂದಿಗೆ ಲಟಾಕಿಯಾದ ಕರಾವಳಿ ಪ್ರಾಂತ್ಯದ ರಷ್ಯಾದ ನೆಲೆಗೆ ತೆರಳಿದ್ದು, ಅಲ್ಲಿಂದ ಹೋರಾಟ ಮುಂದುವರಿಸಲು ಯೋಜಿಸಿದ್ದಾಗಿ ತಿಳಿಸಿದ್ದಾರೆ.
ರಷ್ಯಾದ ನೆಲೆಯು ಡ್ರೋನ್‌ಗಳ ದಾಳಿಗೆ ಒಳಗಾದ ನಂತರ ಡಿಸೆಂಬರ್ 8 ರ ರಾತ್ರಿ ರಷ್ಯಾಕ್ಕೆ ಸ್ಥಳಾಂತರಿಸಲು ರಷ್ಯಾದವರು ನಿರ್ಧರಿಸಿದರು. ಹೀಗಾಗಿ ಯಾವುದೇ ಪ್ಲಾನ್ ಮಾಡಿಕೊಂಡು ಸಿರಿಯಾ ತೊರೆದಿಲ್ಲ ಎಂದು ಅಸಾದ್ ಹೇಳಿದ್ದಾರೆ.
ಈ ಮಧ್ಯೆ ಸೋಮವಾರ ಬೆಳಗ್ಗೆ ಇಸ್ರೇಲಿ ವಾಯುಪಡೆಗಳು ಸಿರಿಯಾದಲ್ಲಿನ ಕ್ಷಿಪಣಿ ಗೋದಾಮಿನ ಮೇಲೆ ದಾಳಿ ನಡೆಸಿದ್ದು, ಇದು 2012ರಿಂದಾಚೆಗಿನ ಅತ್ಯಂತ ಹಿಂಸಾತ್ಮಾಕ ದಾಳಿಯಾಗಿದೆ ಎಂದು ಇಂಗ್ಲೆಂಡ್ ಹೇಳಿದೆ.