ಮುವಾನ್: ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 179ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಸಿಬ್ಬಂದಿ ಹರಸಾಹಸ ಪಟ್ಟು ಇಬ್ಬರ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಬ್ಬಂದಿ ಸೇರಿ 181 ಜನರಿದ್ದ ವಿಮಾನವೊಂದು ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಜಾರಿ ಹೊರಗೆ ಸರಿದು ಮುವಾನ್ ವಿಮಾನ ನಿಲ್ದಾಣದ ತಡೆಗೋಡೆಗೆ ಢಿಕ್ಕಿಯಾಗಿ ಸ್ಫೋಟಗೊಂಡಿತ್ತು.
ಈ ಭೀಕರ ಅಪಘಾತದಲ್ಲಿ 179 ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ವಿಮಾನದಲ್ಲಿದ್ದ 181 ಜನರ ಪೈಕಿ 175 ಪ್ರಯಾಣಿಕರು ಮತ್ತು ಆರು ಮಂದಿ ವಿಮಾನ ಸಿಬ್ಬಂದಿ ಇದ್ದರು ಎನ್ನಲಾಗಿದೆ.
ದಕ್ಷಿಣ ಕೊರಿಯಾದ ಯೋನ್‌ಹಾಪ್ ಸುದ್ದಿ ಸಂಸ್ಥೆಯ ಪ್ರಕಾರ, ಜೆಜು ವಿಮಾನಯಾನ ಸಂಸ್ಥೆಗೆ ಸೇರಿದ ಏರ್ ಫ್ಲೈಟ್ 2216 ಥೈಲ್ಯಾಂಡ್‌ನಿಂದ ಹಿಂತಿರುಗುತ್ತಿದ್ದಾಗ ದಕ್ಷಿಣ ಜಿಯೋಲ್ಲಾ ಪ್ರಾಂತ್ಯದಲ್ಲಿ ಅಪಘಾತಕ್ಕೀಡಾಗಿದೆ.
ದುರಂತಕ್ಕೆ ಪಕ್ಷಿಗಳ ದಾಳಿ ಕಾರಣ!
ಇನ್ನು ಈ ಭೀಕರ ವಿಮಾನ ಅಪಘಾತಕ್ಕೆ ಪಕ್ಷಿಗಳ ದಾಳಿ ಕಾರಣ ಎಂದು ಶಂಕಿಸಲಾಗುತ್ತಿದ್ದು, ವಿಮಾನ ಪತನಕ್ಕೂ ಮುನ್ನ ವಿಮಾನದ ಪೈಲಟ್ ವಾಯುಗೋಪುರಕ್ಕೆ 'ಮೇಡೇ' ತುರ್ತು ಸಂದೇಶ ರವಾನಿಸಿದ್ದ. ವಿಮಾನದ ಎಂಜಿನ್ ಗೆ ಪಕ್ಷಿಗಳು ಢಿಕ್ಕಿಯಾಗಿ ಅದು ವಿಫಲವಾಗಿತ್ತು. ಈ ವೇಳೆ ಪೈಲಟ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ ತುರ್ತು ಲ್ಯಾಂಡಿಂಗ್ ಗೆ ಮುಂದಾಗಿದ್ದರು.
ವಾಯುಗೋಪುರದಿಂದಲೂ ಲ್ಯಾಂಡಿಂಗ್ ಅನುಮತಿ ದೊರೆತಿದ್ದಾದರೂ ಪೈಲಟ್ ಲ್ಯಾಂಡಿಂಗ್ ಗೆ ಸುಮಾರು ಮೂರು ನಿಮಿಷಗಳನ್ನು ತೆಗೆದುಕೊಂಡಿದ್ದ. ಕಾರಣ ಈ ವೇಳೆ ವಿಮಾನದ ಲ್ಯಾಂಡಿಂಗ್ ಗೇರ್ ಕೂಡ ವಿಫಲವಾದ ಹಿನ್ನಲೆಯಲ್ಲಿ ಪೈಲಟ್ ಮುವಾನ್ ವಿಮಾನವನ್ನು ಬೆಲ್ಲಿ ಲ್ಯಾಂಡಿಂಗ್ ಮಾಡಲು ಮುಂದಾಗಿದ್ದ. ಆದರೆ ಬೆಲ್ಲಿ ಲ್ಯಾಂಡಿಂಗ್ ವಿಫಲವಾಗಿ ವಿಮಾನ ನೇರವಾಗಿ ಹೋಗಿ ನಿಲ್ದಾಣದ ತಡೆಗೋಡೆಗೆ ಢಿಕ್ಕಿಯಾಗಿ ಸ್ಫೋಟಗೊಂಡಿದೆ ಎನ್ನಲಾಗಿದೆ.
ವಿಮಾನವು ಬಹುತೇಕ ಸಂಪೂರ್ಣವಾಗಿ ನಾಶವಾಗಿದ್ದು, ನಾವು ಅವಶೇಷಗಳನ್ನು ಪತ್ತೆಹಚ್ಚಿ ಮರುಪಡೆಯಲು ಸಮಯ ತೆಗೆದುಕೊಳ್ಳುತ್ತಿದೆ" ಎಂದು ಮುವಾನ್‌ನಲ್ಲಿರುವ ಅಗ್ನಿಶಾಮಕ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.