ವಿದೇಶ

ಮಿಜೋರಾಂ: ರನ್ ವೇ ಯಿಂದ ಜಾರಿ ಮ್ಯಾನ್ಮಾರ್ ಮಿಲಿಟರಿ ವಿಮಾನ ಅಪಘಾತ, ಎಂಟು ಮಂದಿಗೆ ಗಾಯ

Srinivasamurthy VN

ಐಜ್ವಾಲ್: ಮ್ಯಾನ್ಮಾರ್ ಮಿಲಿಟರಿ ವಿಮಾನವೊಂದು ಮಿಜೋರಾಂ ವಿಮಾನ ನಿಲ್ದಾಣದ ರನ್ ವೇ ಮೇಲಿಂದ ಜಾರಿ ಅಪಘಾತಕ್ಕೀಡಾಗಿರುವ ಘಟನೆ ಮಂಗಳವಾರ ಬೆಳಗ್ಗೆ ವರದಿಯಾಗಿದೆ.

ತಮ್ಮ ದೇಶದಲ್ಲಿನ ಬಂಡುಕೋರ ಗುಂಪುಗಳೊಂದಿಗೆ ತೀವ್ರ ಘರ್ಷಣೆಯ ನಂತರ ಈಶಾನ್ಯ ರಾಜ್ಯದಲ್ಲಿ ಆಶ್ರಯ ಪಡೆದಿದ್ದ ಮ್ಯಾನ್ಮಾರ್ ಸೇನಾ ಸಿಬ್ಬಂದಿ ಕರೆದೊಯ್ಯಲು ಆಗಮಿಸಿದ್ದ ಮ್ಯಾನ್ಮಾರ್ ಸೇನಾ ವಿಮಾನ ಮಿಜೋರಾಂನ ಲೆಂಗ್‌ಪುಯಿ ವಿಮಾನ ನಿಲ್ದಾಣದಲ್ಲಿ ರನ್ ವೇ ಯಿಂದ ಜಾರಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ 8 ಮಂದಿ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಮಿಜೋರಾಂನ  ಲೆಂಗ್‌ಪುಯಿ ವಿಮಾನ ನಿಲ್ದಾಣ ಸವಾಲಿನಿಂದ ಕೂಡಿದ್ದು, ಇಲ್ಲಿ ವಿಮಾನ ಹಾರಿಸುವುದು ಸಾಹಸದ ಕೆಲಸವೇ ಸರಿ. ಲೆಂಗ್‌ಪುಯಿಯಲ್ಲಿರುವ ಟೇಬಲ್‌ಟಾಪ್ ರನ್‌ವೇ ಪೈಲಟ್ ಗಳಿಗೆ ಪ್ರತೀಬಾರಿ ಸವಾಲೆಸೆಯುತ್ತದೆ. ಕೊಂಚ ಯಾಮಾರಿದರೂ ವಿಮಾನ ರನ್ ವೇಯಿಂದ ಜಾರಿ ಅಪಘಾತಕ್ಕೀಡಾಗುವ ಸಂಭವವೇ ಹೆಚ್ಚು. 

ಇನ್ನು ಮ್ಯಾನ್ಮಾರ್ ಆಂತರಿಕ ಸಂಘರ್ಷ ಮುಂದುವರೆದಿರುವಂತೆಯೇ ಭಾರತ ಸೋಮವಾರ ಕನಿಷ್ಠ 184 ಮ್ಯಾನ್ಮಾರ್ ಸೈನಿಕರನ್ನು ವಾಪಸ್ ಕಳುಹಿಸಿದೆ. ಅಸ್ಸಾಂ ರೈಫಲ್ಸ್‌ನ ಅಧಿಕೃತ ಹೇಳಿಕೆಯ ಪ್ರಕಾರ ಕಳೆದ ವಾರ ಒಟ್ಟು 276 ಮ್ಯಾನ್ಮಾರ್ ಸೈನಿಕರು ಮಿಜೋರಾಂಗೆ ಪ್ರವೇಶಿಸಿದ್ದು, ಸೋಮವಾರ ಅವರಲ್ಲಿ 184 ಸೈನಿಕರನ್ನು ಮ್ಯಾನ್ಮಾರ್‌ಗೆ ಕಳುಹಿಸಲಾಗಿದೆ ಎಂದು ದೃಢಪಡಿಸಿದೆ. ಸೈನಿಕರು ಜನವರಿ 17 ರಂದು ಮಿಜೋರಾಂನ ಲಾಂಗ್ಟ್ಲೈ ಜಿಲ್ಲೆಯ ಭಾರತ-ಮ್ಯಾನ್ಮಾರ್-ಬಾಂಗ್ಲಾದೇಶ ಟ್ರೈಜಂಕ್ಷನ್‌ನಲ್ಲಿರುವ ಬಂಡುಕ್ಬಂಗಾ ಗ್ರಾಮವನ್ನು ಪ್ರವೇಶಿಸಿದ್ದರು. ಮತ್ತು ತಮಗೆ ನೆರವು ನೀಡುವಂತೆ ಅಸ್ಸಾಂ ರೈಫಲ್ಸ್ ಅನ್ನು ಮನವಿ ಮಾಡಿಕೊಂಡಿದ್ದರು. 

ಸ್ವತಂತ್ರ ರಾಖೈನ್ ರಾಜ್ಯಕ್ಕಾಗಿ ಹೋರಾಡುತ್ತಿರುವ ಮ್ಯಾನ್ಮಾರ್ ದಂಗೆಕೋರ ಗುಂಪು 'ಅರಾಕನ್ ಆರ್ಮಿ'ಗೆ ಸೇರಿದ ಹೋರಾಟಗಾರರು ಸೈನಿಕರ ಶಿಬಿರವನ್ನು ಅತಿಕ್ರಮಿಸಿ ವಶಪಡಿಸಿಕೊಂಡು ಅವರು ಅಲ್ಲಿಂದ ಪಲಾಯ ಮಾಡುವಂತೆ ಮಾಡಿದ್ದರು.

SCROLL FOR NEXT