ಫಿಲಡೆಲ್ಫಿಯಾ: Palestin ಪರ ಪ್ರತಿಭಟನಾಕಾರರು ಅಮೆರಿಕ ದೇಶದ ಧ್ವಜವನ್ನು ಅದರ ನೆಲದಲ್ಲೇ ಸುಟ್ಟುಹಾಕಿರುವ ಘಟನೆ ಫಿಲಡೆಲ್ಫಿಯಾದಲ್ಲಿ ನಡೆದಿದೆ.
ಫಿಲಡೆಲ್ಫಿಯಾದ ಸಿಟಿ ಹಾಲ್‌ನ ಹೊರಗೆ ಫೆಲೆಸ್ತೀನಿಯನ್ ಪರ ಪ್ರತಿಭಟನಾಕಾರರು ಅಮೆರಿಕ ಮತ್ತು ಇಸ್ರೇಲ್ ಧ್ವಜಗಳನ್ನು ಸುಟ್ಟು ಹಾಕಿದ್ದಾರೆ. ಇಸ್ರೇಲ್ ಗಾಜಾಪಟ್ಟಿಯಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಪ್ಯಾಲೆಸ್ತೀನ್ ನಲ್ಲಿ ನಡೆಯುತ್ತಿರುವ ಸಂಘರ್ಷದ ವಿಚಾರವಾಗಿ ಪ್ಯಾಲೆಸ್ತೀನ್ ಪರ ಹೋರಾಟಗಾರರು ಫಿಲಡೆಲ್ಫಿಯಾದ ಸಿಟಿ ಹಾಲ್‌ನ ಹೊರಗೆ ಭಾರಿ ಪ್ರತಿಭಟನೆ ನಡೆಸಿದರು. ಸುಮಾರು 400ಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರು ಅಮೆರಿಕದ ಧ್ವಜ ಸುಟ್ಟು ಘೋಷಣೆ ಕೂಗಿದರು.
ಈ ವೇಳೆ ಫಿಲಡೆಲ್ಫಿಯಾ ಮಧ್ಯ ಪ್ರವೇಶಿಸಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದ್ದಾರೆ. ಪೊಲೀಸರೊಂದಿಗೂ ಪ್ರತಿಭಟನಾಕಾರರು ಸಂಘರ್ಷ ನಡೆಸಿ ಅವರ ಮೇಲೂ ಹಲ್ಲೆಗೆ ಮುಂದಾದಾಗ ಪೊಲೀಸರು ಅವರ ಮೇಲೆ ಲಾಠಿ ಪ್ರಹಾರ ಮಾಡಿ ಅಟ್ಟಾಡಿಸಿದ್ದಾರೆ.
ಇದಕ್ಕೂ ಮೊದಲು ಅಮೆರಿಕ ಮತ್ತು ಇಸ್ರೇಲ್ ಧ್ವಜಗಳನ್ನು ಸುಡುವಾಗ ಹಲವಾರು ಪ್ರತಿಭಟನಾಕಾರರು ಪ್ಯಾಲೇಸ್ಟಿನಿಯನ್ ಧ್ವಜಗಳನ್ನು ಬೀಸುತ್ತಿದ್ದರು. ಅಲ್ಲದೆ ಪ್ರತಿಭಟನಾ ನಿರತ ಮಹಿಳೆಯೊಬ್ಬಳು ಸುಡುತ್ತಿರುವ ವಸ್ತುಗಳ ಮೇಲೆ ಅಮೆರಿಕದ ಧ್ವಜವನ್ನು ಎಸೆದಿರುವುದೂ ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನು ಈ ಪ್ರಕರಣದಲ್ಲಿ ಹಲವರನ್ನು ಪೊಲೀಸರು ಬಂಧಿಸಿದ್ದು, ಘಟನೆಯನ್ನು ಮೊದಲ ಫಿಲಡೆಲ್ಫಿಯಾದ ಉಪ ಕಮಿಷನರ್ ಜಾನ್ ಸ್ಟ್ಯಾನ್‌ಫೋರ್ಡ್ ಕಟುವಾಗಿ ಟೀಕಿಸಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ನಡವಳಿಕೆಯನ್ನು ನಾವು ಸಹಿಸಲಾಗುವುದಿಲ್ಲ.
ದೇಶದ ಎಲ್ಲ ಪ್ರಜೆಗಳಿಗೂ ವಾಕ್ ಸ್ವಾತಂತ್ರ್ಯವಿದೆ. ಆದರೆ ಅದರ ದುರುಪಯೋಗಕ್ಕೆ ನಾವು ಬಿಡುವುದಿಲ್ಲ. ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ಆದರೆ ಪ್ರತಿಭಟನೆ ಹೆಸರಿನಲ್ಲಿ ಅಮೆರಿಕದ ಸಾರ್ವಭೌಮತ್ವ ಹರಣಕ್ಕೆ ನಾವು ಅನುವು ಮಾಡಿಕೊಡುವುದಿಲ್ಲ ಎಂದು ಕಿಡಿಕಾರಿದ್ದಾರೆ.