ಇಸ್ಲಾಮಾಬಾದ್: 2018 ರಲ್ಲಿ ಕಾನೂನುಬಾಹಿರವಾಗಿ ವಿವಾಹವಾದ ಪ್ರಕರಣದಲ್ಲಿ ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರನ್ನು ಪಾಕಿಸ್ತಾನದ ನ್ಯಾಯಾಲಯ ಶನಿವಾರ ಖುಲಾಸೆಗೊಳಿಸಿದೆ.
ಕಳೆದ ಫೆಬ್ರವರಿಯಲ್ಲಿ ಇಮ್ರಾನ್ ಖಾನ್ ದಂಪತಿಗೆ ನೀಡಲಾಗಿದ್ದ ಏಳು ವರ್ಷಗಳ ಜೈಲು ಶಿಕ್ಷೆಯನ್ನು ರಾವಲ್ಪಿಂಡಿಯ ಗ್ಯಾರಿಸನ್ ಸಿಟಿಯ ನ್ಯಾಯಾಲಯ ರದ್ದುಗೊಳಿಸಿದೆ ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಪರ ವಕೀಲರಲ್ಲಿ ಒಬ್ಬರಾದ ನಯೀಮ್ ಪಂಜುತಾ ಅವರು ಹೇಳಿದ್ದಾರೆ.
ದಂಪತಿಗಳ ವಿರುದ್ಧ ಇತರೆ ಯಾವುದೇ ಪ್ರಕರಣಗಳು ಇಲ್ಲದಿದ್ದರೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ತನ್ನ ಸಂಕ್ಷಿಪ್ತ ಆದೇಶದಲ್ಲಿ ಹೇಳಿದೆ.
71 ವರ್ಷದ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಎಂದೂ ಕರೆಯಲ್ಪಡುವ ಬುಶ್ರಾ ಖಾನ್ ಅವರಿಗೆ ಕಳೆದ ಫೆಬ್ರವರಿಯಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅವರು ಹಿಂದಿನ ವಿವಾಹದಿಂದ ಬೀಬಿಯ ವಿಚ್ಛೇದನ ಮತ್ತು ವಿವಾಹದ ನಡುವಿನ ಅಗತ್ಯ ಮಧ್ಯಂತರವನ್ನು ಅನುಸರಿಸಲು ವಿಫಲವಾಗುವ ಮೂಲಕ ಇಸ್ಲಾಮಿಕ್ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ನ್ಯಾಯಾಲಯವು ಅವರಿಗೆ ಶಿಕ್ಷೆ ವಿಧಿಸಿತ್ತು.
2017ರ ಆಗಸ್ಟ್‌ನಲ್ಲಿ ವಿಚ್ಛೇದನ ಪಡೆದಿದ್ದೇವೆ ಎಂದು ಬೀಬಿ ಹೇಳಿದ್ದಾರೆ ಮತ್ತು ವಿಚಾರಣೆಯ ಸಮಯದಲ್ಲಿ ದಂಪತಿಗಳು ಕಾಯುವ ಅವಧಿಯನ್ನು ಉಲ್ಲಂಘಿಸಿಲ್ಲ ಎಂದು ಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.