ವಾಷಿಂಗ್ಟನ್: ನಮ್ಮ ದೇಶದಲ್ಲಿ ಇಂತಹ ಕೃತ್ಯ ನಡೆದಿರುವುದನ್ನು ನಂಬಲಾಗುತ್ತಿಲ್ಲ. ಘಟನೆ ಬಳಿಕ ಅಮೆರಿಕಾ ಸೀಕ್ರೆಟ್ ಸರ್ವಿಸ್ ಹಾಗೂ ಕಾನೂನು ವ್ಯವಸ್ಥೆ ಕೈಗೊಂಡ ತ್ವರಿತ ಕ್ರಮಕ್ಕೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆಂದು ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಘಟನೆ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್ ಅವರು, ಗುಂಡಿನ ದಾಳಿಯಿಂದ ನನ್ನ ಮೇಲ್ಬಾಗದ ಕಿವಿ ಗಾಯಗೊಂಡಿದೆ. ಘಟನೆ ವೇಳೆ ಕೇಳಿ ಬಂದ ಗುಂಡಿನ ಸದ್ದು ಏನೇ ನಡೆಯುತ್ತಿದೆ ಎಂಬ ಸಂದೇಶವನ್ನ ನೀಡಿತ್ತು. ಕೂಡಲೇ ಕಿವಿಯಿಂದ ರಕ್ತಸ್ರಾವವಾಗುತ್ತಿರುವುದು ತಿಳಿಯಿತು. ಘಟನೆಯಲ್ಲಿ ಗಾಯಗೊಂಡವರು ಶೀಘ್ರಗತಿಯಲ್ಲಿ ಗುಣಮುಖರಾಗಲಿ. ಮೃತಪಟ್ಟವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆಂದು ಹೇಳಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ ನಮ್ಮ ದೇಶದಲ್ಲಿ ಇಂತಹ ಕೃತ್ಯ ನಡೆದಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಶೂಟರ್ ಹತ್ಯೆಯಾಗಿರುವ ಬಗ್ಗೆ ಏನೂ ತಿಳಿದಿಲ್ಲ. ಘಟನೆ ವೇಳೆ ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವೀಸ್ ಮತ್ತು ಕಾನೂನು ಜಾರಿ ಸಂಸ್ಥೆಗಳು ಕೈಗೊಂಡ ತ್ವರಿತ ಕ್ರಮಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆಂದು ತಿಳಿಸಿದ್ದಾರೆ.
ಪೆನ್ಸಿಲ್ವೇನಿಯಾದಲ್ಲಿ ಬಟ್ಲರ್‌ನಲ್ಲಿ ಹಮ್ಮಿಕೊಂಡಿದ್ದ ಹೊರಾಂಗಣ ರ‍್ಯಾಲಿಯನ್ನು ಉದ್ದೇಶಿಸಿ ಟ್ರಂಪ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಬಂದೂಕುಧಾರಿಗಳು ಗುಂಡು ಹಾರಿಸಿದ್ದರು. ಕೂಡಲೇ ವೇದಿಕೆ ಬಳಿಯಿದ್ದ ಭದ್ರತಾ ಸಿಬ್ಬಂದಿ ಟ್ರಂಪ್ ನೆರವಿಗೆ ಧಾವಿಸಿ, ರಕ್ಷಣೆ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಸುರಕ್ಷಿತವಾಗಿದ್ದಾರೆ ಎಂದು ಅಮೆರಿಕದ ಸೀಕ್ರೆಟ್ ಸರ್ವಿಸ್ ತಂಡ ತಿಳಿಸಿದೆ.
ರ್ಯಾಲಿ ವೇಳೆ ಬೃಹತ್ ಜನ ಸೇರಿದ್ದ ಮುಂಭಾಗದ ವೇದಿಕೆಯಲ್ಲಿದ್ದ ಟ್ರಂಪ್ ಮೇಲೆ ಗುಂಡಿನ ದಾಳಿಯಾಗಿದ್ದು, ಮುಖ ಹಾಗೂ ಬಲಗಿವಿಯಲ್ಲಿ ರಕ್ತ ಕಾಣಿಸಿಕೊಂಡಿದೆ. ಘಟನೆ ನಡೆದ ಕೂಡಲೆ ಪ್ರತಿರೋಧ ವ್ಯಕ್ತಪಡಿಸಿದ ಟ್ರಂಪ್, ಕೈ ಎತ್ತಿ ಮುಷ್ಠಿ ಹಿಡಿದು ಸಾರ್ವಜನಿಕರತ್ತ ತಮ್ಮ ವಿರೋಧ ವ್ಯಕ್ತಪಡಿಸಿದರು.
ಘಟನೆ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ನವೆಂಬರ್ ನಲ್ಲಿ ನಡೆಯಲಿರುವ ಅಮೇರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಬಿರುಸು ಪಡೆದಿತ್ತು. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಹಾಲಿ ಅಧ್ಯಕ್ಷ ಜೋ ಬೈಡನ್ ನಡುವೆ ತೀವ್ರ ಪೈಪೋಟಿಯೂ ಇದೆ. ಇಂತಹ ಸಂದರ್ಭದಲ್ಲಿ ಆಗಿರುವ ಟ್ರಂಪ್ ಮೇಲಿನ ಗುಂಡಿನ ದಾಳಿ ಅಮೆರಿಕ ದೇಶವನ್ನು ಬೆಚ್ಚಿ ಬೀಳಿಸಿದೆ
ಟ್ರಂಪ್ ಸುರಕ್ಷಿತ: ಯುಎಸ್ ಸೀಕ್ರೆಟ್ ಸರ್ವೀಸ್
ಶೂಟರ್ ವೇದಿಕೆ ಕಡೆಗೆ ಹಲವು ಬಾರಿ ಗುಂಡಿನ ದಾಳಿ ನಡೆಸಿದ್ದ. ಕೂಡಲೇ ಟ್ರಂಪ್ ಅವರನ್ನು ಸುತ್ತುವರೆದು ರಕ್ಷಣೆ ಮಾಡಲಾಯಿತು. ಘಟನೆಯಿಂದ ಟ್ರಂಪ್ ಅವರಿಗೆ ಗಾಯವಾಗಿದೆ. ಆದರೆ, ಸುರಕ್ಷಿತವಾಗಿದ್ದಾರೆಂದು US ಸೀಕ್ರೆಟ್ ಸರ್ವಿಸ್ ಹೇಳಿಕೆಯಲ್ಲಿ ತಿಳಿಸಿದೆ.
ಘಟನೆ ಬಳಿಕ ಶೂಟರ್ ನನ್ನು ಹತ್ಯೆ ಮಾಡಲಾಗಿದ್ದು, ಗುರುತು ಪತ್ತೆ ಮಾಡಲಾಗುತ್ತಿದೆ, ಶೂಟರ್ ಪಕ್ಕದಲ್ಲಿದ್ದ ಮತ್ತೊಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಟ್ಟು ಇಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಿದೆ.
ಘಟನೆ ವೇಳೆ ತಕ್ಷಣ ರಕ್ಷಣೆ ಮಾಡಿದ ಹಾಗೂ ತ್ವರಿತ ಕಾನೂನು ಕ್ರಮ ಕೈಗೊಂಡ ಸಿಬ್ಬಂದಿಗಳಿಗೆ ಟ್ರಂಪ್ ಧನ್ಯವಾದ ತಿಳಿಸಿದ್ದು, ಸದ್ಯ ಸ್ಥಳೀಯ ಮಟ್ಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಕ್ತಾರ ಸ್ಟೀವನ್ ಚಂಗ್ ಹೇಳಿದ್ದಾರೆ.
ಗುಂಡು ದಾಳಿಯ ತಕ್ಷಣ ಇಡೀ ಸಭೆಯಲ್ಲಿ ಗೊಂದಲ, ಗದ್ದಲ ಕಿರುಚಾಟ ಕೇಳಿಬಂದಿತು. ರ್ಯಾಲಿಯಲ್ಲಿ ನೆರೆದಿದ್ದ ಜನರೂ ಭೀತಿಯಿಂದ ಚೆಲ್ಲಾಪಿಲ್ಲಿಯಾಗಿದ್ದರು, ಎಲ್ಲರಲ್ಲೂ ಗೊಂದಲ ಉಂಟಾಗಿತ್ತು ಎಂದು ರ್ಯಾಲಿಯಲ್ಲಿ ಭಾಗವಸಿದವರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಬಿಲಿಯನೇರ್ ಎಲಾನ್ ಮಸ್ಕ್ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಕ್ಷಣ ಟ್ರಂಪ್ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ. ಜೊತೆಗೆ ಘಟನೆಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ.