ಅಬುಧಾಬಿ: ಕುವೈತ್ ಅಗ್ನಿ ದುರಂತದಲ್ಲಿ 45 ಭಾರತೀಯರು ಸೇರಿದಂತೆ 49 ಜನ ಸಜೀವ ದಹನವಾಗಿದ್ದು, ಖ್ಯಾತ ಎನ್‌ಆರ್‌ಐ ಉದ್ಯಮಿ ಮತ್ತು ಯುಎಇ ಮೂಲದ ಲುಲು ಗ್ರೂಪ್ ಅಧ್ಯಕ್ಷ ಎಂಎ ಯೂಸುಫ್ ಅಲಿ ಅವರು ಗುರುವಾರ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಕುವೈತ್ ನ ದಕ್ಷಿಣ ನಗರವಾದ ಮಂಗಾಫ್‌ನಲ್ಲಿ 196 ವಲಸೆ ಕಾರ್ಮಿಕರು ತಂಗಿದ್ದ ಏಳು ಅಂತಸ್ತಿನ ಕಟ್ಟಡದಲ್ಲಿ ಬುಧವಾರ ಭಾರಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಕನಿಷ್ಠ 49 ವಿದೇಶಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ.
ಪರಿಹಾರ ನಿಧಿಯ ಭಾಗವಾಗಿ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ನೀಡಲಾಗುವುದು ಎಂದು ಅಬುಧಾಬಿಯಲ್ಲಿ ಲುಲು ಗ್ರೂಪ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರ ಮತ್ತು ಕೇರಳ ಸರ್ಕಾರ ಕೂಡ ಮೃತರ ಕುಟುಂಬಕ್ಕೆ ಇದೇ ರೀತಿಯ ಪರಿಹಾರ ಘೋಷಿಸಿವೆ.
ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಗುರುವಾರ ಕುವೈತ್ ತಲುಪಿದ್ದು, ಬೆಂಕಿಯಲ್ಲಿ ಗಾಯಗೊಂಡ ಕೆಲವು ಭಾರತೀಯರನ್ನು ಭೇಟಿ ಮಾಡಿದರು. ಗಾಯಗೊಂಡವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.