ಲಂಡನ್: ದೇಶದಿಂದ ಪರಾರಿಯಾಗಿ ವಿದೇಶದಲ್ಲಿರುವ ಇಬ್ಬರು ವಂಚಕರು ಒಂದೇ ಕಡೆ ಕಾಣಿಸಿಕೊಂಡಿದ್ದಾರೆ. ಐಪಿಎಲ್ ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಹಾಗೂ ಸುಸ್ತೀದಾರ ವಿಜಯ್ ಮಲ್ಯ, ಇಬ್ಬರೂ ಒಂದೇ ಸ್ಥಳದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳಾಗಿದ್ದಾರೆ.
ಬ್ರಿಟನ್ ನಲ್ಲಿ ನಡೆದ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ ಹಾಗೂ ಜಾಸ್ಮಿನ್ ವಿವಾಹ ಕಾರ್ಯಕ್ರಮದಲ್ಲಿ ವಿಜಯ್ ಮಲ್ಯ ಹಾಗೂ ಲಲಿತ್ ಮೋದಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಹರ್ಟ್‌ಫೋರ್ಡ್‌ಶೈರ್‌ನಲ್ಲಿರುವ ವಿಜಯ್ ಮಲ್ಯ ಅವರ ಐಷಾರಾಮಿ ಎಸ್ಟೇಟ್‌ನಲ್ಲಿ ಸಿದ್ಧಾರ್ಥ ಮಲ್ಯ ಮತ್ತು ಜಾಸ್ಮಿನ್ ವಿವಾಹವಾದರು. ಈ ಜೋಡಿ ಈ ಹಿಂದೆ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು. ಈ ಬಳಿಕ ಸಾಂಪ್ರದಾಯಿಕ ಹಿಂದೂ ಮಾದರಿಯಲ್ಲಿ ವಿವಾಹ ಸಮಾರಂಭ ನಡೆಸಿದ್ದಾರೆ.
ವಿಜಯ್ ಮಲ್ಯ 900 ಕೋಟಿಗೂ ಅಧಿಕ ಸಾಲವನ್ನು ಬ್ಯಾಂಕ್ ಗಳಿಗೆ ಪಾವತಿಸದೇ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿ ಭಾರತ ಬಿಟ್ಟು ಪರಾರಿಯಾಗಿದ್ದಾರೆ. ಮತ್ತೊಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಮತ್ತು ಇತರ ಪ್ರಕರಣಗಳ ಆರೋಪ ಹೊತ್ತಿದ್ದು ದೇಶ ಬಿಟ್ಟು ಪರಾರಿಯಾಗಿದ್ದಾರೆ. ಐಪಿಎಲ್ 2010 ರ ನಂತರ ಲಲಿತ್ ಮೋದಿ ಅವರನ್ನು ಬಿಸಿಸಿಐನಿಂದ ಅಮಾನತುಗೊಳಿಸಲಾಗಿತ್ತು.
ಐಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಲಲಿತ್ ಮೋದಿ, ವಿಶ್ವ ಕ್ರೀಡಾ ಸಮೂಹದ (ಡಬ್ಲ್ಯುಎಸ್‌ಜಿ) ಅಧಿಕಾರಿಗಳೊಂದಿಗೆ ಶಾಮೀಲಾಗಿ 753 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪ ಅವರ ವಿರುದ್ಧ ಇದೆ.