ಟೆಹ್ರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಅವರ ಕುಟುಂಬ ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಸಮರೋಪಾದಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಇರಾನ್ ಅಧ್ಯಕ್ಷ ಇಬ್ರಹಾಂ ರೈಸಿ ಇರಾನ್‌ನ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅವರ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ರಕ್ಷಣಾ ಪಡೆ ಹೆಲಿಕಾಪ್ಟರ್ ಇರುವ ಜಾಗವನ್ನು ತಲುಪಲು ಹರಸಾಹಸ ಪಡುತ್ತಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಟೆಹ್ರಾನ್‌ನಿಂದ ಸುಮಾರು 600 ಕಿಮೀ ದೂರದ ಪೂರ್ವ ಅಜರ್‌ಬೈಜಾನ್‌ನ ಜೋಲ್ಫಾದಲ್ಲಿ ಅಧ್ಯಕ್ಷರನ್ನು ಹೊತ್ತ ಹೆಲಿಕಾಪ್ಟರ್ ಹಾರ್ಡ್ ಲ್ಯಾಂಡಿಂಗ್ ಮಾಡಿದೆ ಎಂದು ಇರಾನ್‌ನ ಆಂತರಿಕ ಸಚಿವ ಅಹ್ಮದ್ ವಾಹಿದಿ ದೃಢಪಡಿಸಿದ್ದಾರೆ.
ಹೆಲಿಕಾಪ್ಟರ್‌ಗೆ ಏನಾಯಿತು ಮತ್ತು ಅದರಲ್ಲಿ ಯಾರು ಇದ್ದರು ಎಂಬುದರ ಕುರಿತು ತಕ್ಷಣ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಹಲವು ಮಾಧ್ಯಮ ಏಜೆನ್ಸಿಗಳು ಹಲವು ಬಗೆಯ ವರದಿ ನೀಡಿದ್ದು, ಇಬ್ರಹಾಂ ರೈಸಿ ಸುರಕ್ಷತೆ ಕುರಿತು ಮಾಹಿತಿ ಲಭ್ಯವಾಗಿಲ್ಲ. ಹೆಲಿಕಾಪ್ಟರ್ "ಹಾರ್ಡ್ ಲ್ಯಾಂಡಿಂಗ್" ಮಾಡಿದೆ ಎಂದು ಮೊದಲು ವರದಿ ಮಾಡಲಾಗಿತ್ತು, ಆದರೆ ಸುದ್ದಿ ಸಂಸ್ಥೆ ಐಆರ್ ಎನ್ಎ ಈಗ ಹೆಲಿಕಾಪ್ಟರ್ ಅಪಘಾತಕ್ಕೆ ಒಳಗಾಗಿದೆ, ಸಂಭಾವ್ಯ ಗಾಯಗಳು ಅಥವಾ ಹಾನಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಿಲ್ಲ" ಎಂದು ವರದಿ ಮಾಡಿದೆ.
ಹೊಸ ರಕ್ಷಣಾ ತಂಡಗಳು ಮತ್ತು ಕೆಲವು ಪರ್ವತಾರೋಹಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸೇರಿಕೊಂಡಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ತಾಪಮಾನ ಕಡಿಮೆ ಇದ್ದು ಕಳಪೆ ಹವಾಮಾನದ ಕಾರಣ, ವಾಯು ಶೋಧ ಮತ್ತು ಹೆಲಿಕಾಪ್ಟರ್ ಹಾರಾಟ ಸಾಧ್ಯವಿಲ್ಲದ ಕಾರಣ, ರಸ್ತೆಯ ಮೂಲಕವೇ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಪ್ರದೇಶದಲ್ಲಿ ದಟ್ಟವಾದ ಮಂಜಿನ ಪರಿಣಾಮವಾಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.