ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದು, ಇರಾನ್ ದೇಶದ ಜನತೆ ತಮ್ಮ ಅಧ್ಯಕ್ಷನ ಸಾವನ್ನು ಸಂಭ್ರಮಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಇಬ್ರಾಹಿಂ ರೈಸಿ ಸಾವನ್ನು ಸಂಭ್ರಮಿಸಿ ಪೋಸ್ಟ್ ಮಾಡುತ್ತಿರುವ ನೆಟ್ಟಿಗರು, ಈ ಅಪಘಾತದಲ್ಲಿ ಯಾರಾದರು ಬದುಕಿ ಉಳಿದಿದ್ದರೆ, ಗತಿ ಏನಾಗುತ್ತಿತ್ತು ಎಂಬುದನ್ನು ಯೋಚಿಸುವಂತೆ ಮಾಡಿದ ಹೆಲಿಕಾಪ್ಟರ್ ದುರಂತ ಇತಿಹಾಸದಲ್ಲಿ ಇದೊಂದೇ ಇರಬೇಕು ಎಂದು ಇರಾನ್- ಅಮೇರಿಕಾದ ಪತ್ರಕರ್ತ ಮೈಶ್ ಅಲಿನೆಜಾದ್ ಬರೆದಿದ್ದಾರೆ.
ಇರಾನ್ ನ ಮತ್ತೋರ್ವ ಸಾಮಾಜಿಕ ಕಾರ್ಯಕರ್ತ ಈ ದುರಂತದ ಬಗ್ಗೆ ಟ್ವೀಟ್ ಮಾಡಿದ್ದು, Happy World Helicopter Day! ಎಂದು ಬರೆದಿದ್ದು, ಇರಾನ್ ಅಧ್ಯಕ್ಷರ ಸಾವನ್ನು ಸಂಭ್ರಮಿಸಿದ್ದಾರೆ. ಹಲವು ಮಂದಿ ತೆಹ್ರಾನ್ ಹಾಗೂ ಮಶಾದ್ ನಲ್ಲಿ ಹಲವರು ಅಧ್ಯಕ್ಷರ ಸುರಕ್ಷತೆಗಾಗಿ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ಇನ್ನೂ ಕೆಲವೆಡೆ ಅಧ್ಯಕ್ಷರ ಸಾವಿನ ಬಗ್ಗೆ ಮೀಮ್ ಹಾಗೂ ತಮಾಷೆಯ ವಿಷಯಗಳನ್ನು ಪೋಸ್ಟ್ ಮಾಡಿ ಜಾಲತಾಣಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿರುವ ವೀಡಿಯೋಗಳು ಬಹಿರಂಗವಾಗಿದೆ.
ಇಬ್ರಾಹಿಂ ರೈಸಿ ಸಂಭ್ರಮಾಚರಣೆ ಯಾಕೆ?
ಒಂದು ರಾಷ್ಟ್ರದ ಅಧ್ಯಕ್ಷನ ಸಾವನ್ನು ಈ ಪರಿಯಲ್ಲಿ ಸಂಭ್ರಮಿಸಲಾಗುತ್ತದೆ ಎಂದರೆ ಅದರ ಹಿಂದಿನ ಕಾರಣ ಕುತೂಹಲ ಮೂಡಿಸುತ್ತದೆ.
ಇದು ಕೇವಲ ರೈಸಿ ಅವರ ಸಾವಿನ ಸಂಭ್ರಮಾಚರಣೆಯೊ ಅಥವಾ ಧಾರ್ಮಿಕ ಪ್ರಧಾನ ರಾಜ್ಯದಿಂದ ದಮನಕ್ಕೊಳಗಾದ ಜನರ ಹೋರಾಟದ ಸಂಕೇತವೇ? ಎಂಬ ಪ್ರಶ್ನೆಯನ್ನೂ ಮೂಡಿಸುತ್ತಿದೆ.
ರೈಸಿ ಅವರನ್ನು ಮಧ್ಯಮ ಮತ್ತು ಆಧುನಿಕ ಶಿಯಾ ಮುಸ್ಲಿಂ ದೇಶದ ಗುರುತು ಎಂದು ಪರಿಗಣಿಸಲಾಗುತ್ತದೆ. 1979 ರಲ್ಲಿ ಇರಾನ್ ನಲ್ಲಿ ಇಸ್ಲಾಮಿಕ್ ಕ್ರಾಂತಿ ನಡೆದು, ತೀವ್ರ ಸಂಪ್ರದಾಯವಾದಿ ತಿರುವು ತೆಗೆದುಕೊಂಡಿತ್ತು. ರೈಸಿ ಅವರ ಕಟ್ಟರ್ ನಿಲುವುಗಳಿಂದಾಗಿ ಅವರನ್ನು ತೆಹ್ರಾನ್‌ನ ಕಟುಕ (Butcher of Tehran) ಎಂದು ಹೇಳಲಾಗುತ್ತಿತ್ತು. ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಆಪ್ತವಲಯದಲ್ಲಿ ಹೆಸರುವಾಸಿಯಾದ ರೈಸಿ, ಕಠಿಣವಾದಿ, ಇರಾನ್‌ನ ಮುಂದಿನ ಸರ್ವೋಚ್ಚ ನಾಯಕರಾಗುವ ಸಾಲಿನಲ್ಲಿದ್ದರು.
ಧಾರ್ಮಿಕ ನೆಲೆಗಟ್ಟಿನಲ್ಲಿ ಕಠಿಣವಾದಿ, ರೈಸಿ ಇರಾನ್‌ನಲ್ಲಿ ಭಿನ್ನಾಭಿಪ್ರಾಯ ಮತ್ತು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಮುಂದಾಗಿದ್ದರು ಮತ್ತು ಮಹಿಳೆಯರ ಉಡುಪನ್ನು ನಿರ್ಬಂಧಿಸಲು ಕಠಿಣ "ಹಿಜಾಬ್ ಮತ್ತು ಪರಿಶುದ್ಧತೆಯ ಕಾನೂನನ್ನು" ಜಾರಿಗೊಳಿಸಿದ್ದಕ್ಕೆ ಹೆಚ್ಚು ಸುದ್ದಿಯಲ್ಲಿದ್ದರು. ರೈಸಿ ಅಧಿಕಾರಾವಧಿಯಲ್ಲಿ ಕಾನೂನು ಇರಾನ್‌ನಲ್ಲಿ ನೈತಿಕತೆಯ ಪೊಲೀಸರಿಗೆ ಅನಿಯಮಿತ ಅಧಿಕಾರವನ್ನು ನೀಡಿತ್ತು. ಈ ಕಾರಣಗಳಿಂದಾಗಿ ರೈಸಿ ವಿರುದ್ಧ ಅಷ್ಟೇ ಪ್ರಮಾಣದ ಜನಾಕ್ರೋಶವೂ ಮಡುಗಟ್ಟಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.