ಬೈರುತ್: ಕಳೆದ 24 ಗಂಟೆಗಳಲ್ಲಿ ಲೆಬನಾನ್‌ನ ವಿವಿಧ ಪ್ರದೇಶಗಳ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 46 ಮಂದಿ ಸಾವನ್ನಪ್ಪಿದ್ದು, 85 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ವರದಿ ಮಾಡಿದೆ.
ಬಾಲ್ಬೆಕ್-ಹೆರ್ಮೆಲ್ ಗವರ್ನರೇಟ್‌ನಲ್ಲಿ ಐದು ಜನರು ಸಾವನ್ನಪ್ಪಿದ್ದರೆ, ಐವರು ಗಾಯಗೊಂಡಿದ್ದಾರೆ. ನಬಾತಿಹ್ ಗವರ್ನರೇಟ್‌ನಲ್ಲಿ 23 ಜನರು ಸಾವನ್ನಪ್ಪಿದ್ದು, 41 ಮಂದಿ ಗಾಯಗೊಂಡಿದ್ದಾರೆ.
ದಕ್ಷಿಣ ಗವರ್ನರೇಟ್‌ನಲ್ಲಿ 11 ಜನರು ಮೃತಪಟ್ಟಿದ್ದು, 21 ಜನರು ಗಾಯಗೊಂಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬೆಕಾ ಪ್ರದೇಶದಲ್ಲಿ 6 ಮಂದಿ ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿದ್ದಾರೆ, ಮೌಂಟ್ ಲೆಬನಾನ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಹಿಜ್ಬುಲ್ಲಾ ಬಂಡುಕೋರರ ನಡುವಣ ಸಂಘರ್ಷ ಉಲ್ಬಣದ ನಂತರ ಇಸ್ರೇಲ್ ಸೈನ್ಯವು ಸೆಪ್ಟೆಂಬರ್ 23 ರಿಂದ ಲೆಬನಾನ್ ಮೇಲೆ ತೀವ್ರವಾದ ವೈಮಾನಿಕ ದಾಳಿ ನಡೆಸುತ್ತಿದೆ. ಗಾಜಾ ಪಟ್ಟಿಯಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಮುಂದುವರಿದಿರುವ ಕಾರಣ ಸಂಘರ್ಷದ ಭೀತಿಯ ನಡುವೆ ಕಳೆದ ವರ್ಷ ಅಕ್ಟೋಬರ್ 8 ರಿಂದ ಹಿಜ್ಬುಲ್ಲಾ ಬಂಡುಕೋರರು ಮತ್ತು ಇಸ್ರೇಲಿ ಸೇನೆ ನಡುವಣ ಲೆಬನಾನ್-ಇಸ್ರೇಲಿ ಗಡಿಯಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.