ಟೆಲ್ ಅವೀವ್: ಬೈರುತ್ ನಲ್ಲಿ ಇಸ್ರೇಲ್ ವಾಯುಸೇನೆ ನಡೆಸುತ್ತಿರುವ ವಾಯುದಾಳಿ ದಿನೇ ದಿನೇ ತೀವ್ರವಾಗುತ್ತಿದ್ದು, ಅತ್ತ ಹೆಜ್ಬೊಲ್ಲಾ ಬಂಡುಕೋರ ಸಂಘಟನೆಯ ನಾಯಕರೆಲ್ಲ ಕಣ್ಮರೆಯಾಗುತ್ತಿದ್ದಾರೆ.
ಹೌದು.. ಹೆಜ್ಬೊಲ್ಲಾ ನಾಯಕ ಸಯ್ಯದ್ ಹಸನ್ ನಸ್ರಲ್ಲಾಹ್ ಇಸ್ರೇಲ್ ವಾಯುದಾಳಿಯಲ್ಲಿ ಸಾವನ್ನಪ್ಪಿದ ಬೆನ್ನಲ್ಲೇ ಆತನ ಉತ್ತರಾಧಿಕಾರಿಗಳೂ ಕೂಡ ಒಬ್ಬರ ನಂತರ ಒಬ್ಬರು ನಾಪತ್ತೆಯಾಗುತ್ತಿದ್ದಾರೆ.
ಈ ಹಿಂದೆ ಹೆಜ್ಬೊಲ್ಲಾ ಕಮಾಂಡರ್ ನಬಿಲ್ ಕೌಕ್, ಹೆಜ್ಬೊಲ್ಲಾ ಸಂಘಟನೆಯ ಸಂವಹನ ಘಟಕದ ಕಮಾಂಡರ್ ಮೊಹಮ್ಮದ್ ರಶೀದ್ ಸಕಾಫಿ, ನಸ್ರಲ್ಲಾಹ್ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದ್ದ ಹಶೆಮ್ ಸಫೀದ್ದೀನ್ ಇಸ್ರೇಲ್ ವಾಯುದಾಳಿಯಲ್ಲಿ ಹತರಾಗಿದ್ದರು.
ಇದೀಗ ಹೆಜ್ಬೊಲ್ಲಾದ ಮತ್ತೋರ್ವ ಕಮಾಂಡರ್ ಹಾಗೂ ನಸ್ರಲ್ಲಾಹ್ ನ ಸಂಭಾವ್ಯ ಉತ್ತರಾಧಿಕಾರಿ ಕೂಡ ಕಣ್ಮರೆಯಾಗಿದ್ದು, ಆತ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವರದಿಯಾಗಿದೆ. ಶುಕ್ರವಾರದಿಂದಲೇ ಅಂದರೆ ಇಸ್ರೇಲಿ ವೈಮಾನಿಕ ದಾಳಿಯ ಆತನ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಲೆಬನಾನಿನ ಭದ್ರತಾ ಮೂಲಗಳು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿವೆ.
ಇಸ್ರೇಲ್ ಗುರುವಾರ ತಡರಾತ್ರಿ ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ವಾಯುದಾಳಿ ನಡೆಸಿತ್ತು. ಈ ದಾಳಿ ಬೆನ್ನಲ್ಲೇ ನಸ್ರಲ್ಲಾಹ್ ಉತ್ತರಾಧಿಕಾರಿ ಎನ್ನಲಾಗುತ್ತಿದ್ದ ಸಫಿದ್ದೀನ್ ನಾಪತ್ತೆಯಾಗಿದ್ದ. ಈ ಬಗ್ಗೆ ಮಾಹಿತಿ ನೀಡಿದ್ದ ಇಸ್ರೇಲ್ ಸೇನೆ ಸಫಿದ್ದೀನ್ ಹತನಾಗಿದ್ದಾನೆ ಎಂದು ಘೋಷಣೆ ಮಾಡಿತ್ತು.
ಅಲ್ಲದೆ ಈ ಬಗ್ಗೆ ಮಾಹಿತಿ ನೀಡಿದ್ದ ಇಸ್ರೇಲಿ ಲೆಫ್ಟಿನೆಂಟ್ ಕರ್ನಲ್ ನಡಾವ್ ಶೋಶಾನಿ ಶುಕ್ರವಾರ ರಾತ್ರಿಯ ವೈಮಾನಿಕ ದಾಳಿಯನ್ನು ಮಿಲಿಟರಿ ಇನ್ನೂ ಮೌಲ್ಯಮಾಪನ ಮಾಡುತ್ತಿದ್ದು, ಇದು ಹೆಜ್ಬುಲ್ಲಾದ ಗುಪ್ತಚರ ಪ್ರಧಾನ ಕಚೇರಿಯನ್ನು ಗುರಿಯಾಗಿಸಿ ನಡೆಸಿದ ದಾಳಿಯಾಗಿದೆ ಎಂದು ಹೇಳಿದ್ದರು.
ಆದರೆ ಈ ಬಗ್ಗೆ ಹೆಜ್ಬುಲ್ಲಾ ಈ ವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಸ್ರಲ್ಲಾಹ್ ಸಂಭಾವ್ಯ ಉತ್ತರಾಧಿಕಾರಿಯ ನಷ್ಟವು ಹೆಜ್ಬುಲ್ಲಾ ಮತ್ತು ಅದರ ಪೋಷಕ ಇರಾನ್‌ಗೆ ಮತ್ತೊಂದು ಮರ್ಮಾಘಾತವಾದಂತಾಗಿದೆ.