ಮೆಕ್ಸಿಕೋ: ನ್ಯೂ ಮೆಕ್ಸಿಕೋ ಏರ್ ಶೋನಲ್ಲಿ ದುರಂತ ಸಂಭವಿಸಿದ್ದು, ಹಾಲಿವುಡ್ ಚಿತ್ರ "Top Gun: Maverick" ನ ತರಬೇತುದಾರ ವಿಮಾನ ಪತನವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕ್ಯಾಲಿಫೋರ್ನಿಯಾದ ಚಾರ್ಲ್ಸ್ ಥಾಮಸ್ "ಚಕ್" ಕೋಲ್ಮನ್ ಈ ದುರಂತದಲ್ಲಿ ಸಾವನ್ನಪ್ಪಿದ್ದು, ಕೋಲ್ಮನ್ ಚಲಿಸುತ್ತಿದ್ದ ವಿಮಾನ ಆಗಸದಲ್ಲಿ ಒಂದೆರಡು ಸಾಹಸ ಪ್ರವೃತ್ತಿಗಳನ್ನು ಪ್ರದರ್ಶಿಸಿತಾದರೂ ಬಳಿಕ ನಿಯತ್ರಣ ತಪ್ಪಿ ನೇರವಾಗಿ ಭೂಮಿ ಅಪ್ಪಳಿಸಿ ಸ್ಫೋಟಗೊಂಡಿತು ಎನ್ನಲಾಗಿದೆ.
ಈ ದುರಂತದಲ್ಲಿ ಪೈಲಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಚಾರ್ಲ್ಸ್ ಥಾಮಸ್ "ಚಕ್" ಕೋಲ್ಮನ್ ಸಾವನ್ನಪ್ಪಿದ್ದಾರೆ.
ಇದೇ ಕೋಲ್ಮನ್ ಈ ಹಿಂದೆ ಹಾಲಿವುಡ್ ಚಿತ್ರ "Top Gun: Maverick" ನ ತರಬೇತುದಾರರಾಗಿ ಕೆಲಸ ಮಾಡಿದ್ದರು. ಅಲ್ಲದೆ ಕೋಲ್ಮನ್, 10,000 ಗಂಟೆಗಳಿಗಿಂತ ಹೆಚ್ಚು ಹಾರಾಟದ ಅನುಭವ ಹೊಂದಿದ್ದು, ಅದಾಗ್ಯೂ ಕೋಲ್ಮನ್ ವಿಮಾನ ಪತನದ ಕುರಿತು ಅಧಿಕಾರಿಗಳೇ ಆಘಾತ ವ್ಯಕ್ತಪಡಿಸಿದ್ದಾರೆ. ವಿಮಾನ ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಅಧಿಕಾರಿಗಳು ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಚಾರ್ಲ್ಸ್ ಥಾಮಸ್ "ಚಕ್" ಕೋಲ್ಮನ್ ವಿಮಾನ ಎಂಜಿನಿಯರ್, ಏರೋಬ್ಯಾಟಿಕ್ ಮತ್ತು ಪರೀಕ್ಷಾ ಪೈಲಟ್ ಆಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಅವರ ಈ ಅನುಭವಗಳಿಂದಾಗಿಯೇ ಅವರನ್ನು "Top Gun: Maverick" ಸೇರಿದಂತೆ ಹಲವು ಚಿತ್ರಗಳಲ್ಲಿ ತರಬೇತುದಾರನ್ನಾಗಿ ನೇಮಕ ಮಾಡಲಾಗಿತ್ತು.