ನವದೆಹಲಿ: ಅಕ್ರಮ ಹಣ ವರ್ಗಾವಣೆ ಹಾಗೂ ಭಯೋತ್ಪಾದಕರಿಗೆ ಸಿಗುವ ಹಣಕಾಸು ನೆರವಿಗೆ ತಡೆ ಹಾಕುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ FATF ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಭಾರತದಲ್ಲಿನ ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕ ಹಣಕಾಸು ವಿರೋಧಿ ವ್ಯವಸ್ಥೆಯನ್ನು ಶ್ಲಾಘಿಸಿರುವ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ದೇಶದ ವ್ಯವಸ್ಥೆ ಪರಿಣಾಮಕಾರಿಯಾಗಿದೆ, ಆದರೆ ಇಂತಹ ಪ್ರಕರಣಗಳಲ್ಲಿ ಕಾನೂನು ಕ್ರಮಗಳನ್ನು ಬಿಗಿಗೊಳಿಸಲು ಮತ್ತಷ್ಟು ಸುಧಾರಣೆಗಳ ಅಗತ್ಯವಿದೆ ಎಂದು ಎಫ್ಎಟಿಎಫ್ ಅಭಿಪ್ರಾಯಪಟ್ಟಿದೆ.
ಭಾರತಕ್ಕೆ ಸಂಬಂಧಿಸಿದ ಪರಸ್ಪರ ಮೌಲ್ಯಮಾಪನ ವರದಿಯನ್ನು FATF ಗುರುವಾರ ಬಿಡುಗಡೆ ಮಾಡಿದ್ದು, ಜೂನ್ ನಲ್ಲಿ ನಡೆದಿದ್ದ ಸಮಗ್ರ ಸಭೆಯ ಬಳಿಕ 368 ಪುಟಗಳ ವರದಿಯನ್ನು ತಯಾರಿಸಿತ್ತು. ಈ ವಿಭಾಗದಲ್ಲಿ ಭಾರತಕ್ಕೆ ಸಂಬಂಧಿಸಿದ ಕ್ರಮಗಳ ಕುರಿತ ಇತ್ತೀಚಿನ ವಿಮರ್ಶೆಯನ್ನು FATF 2010 ರಲ್ಲಿ ಪ್ರಕಟಿಸಿತ್ತು.
ಕಳೆದ ನವೆಂಬರ್‌ನಲ್ಲಿ ಭಾರತಕ್ಕೆ ಎಫ್‌ಎಟಿಎಫ್ ತಜ್ಞರ ಆನ್-ಸೈಟ್ ಭೇಟಿಯ ನಂತರ ಬಂದ ವರದಿಯು ಭಾರತವನ್ನು "ನಿಯಮಿತ ಅನುಸರಣೆ" ವಿಭಾಗದಲ್ಲಿ ಇರಿಸಿದ್ದು, ಈ ವಿಭಾಗದಲ್ಲಿ ಜಿ-20ಯ ಇತರ ನಾಲ್ಕು ದೇಶಗಳು ಮಾತ್ರ ಸ್ಥಾನ ಹಂಚಿಕೊಂಡಿವೆ.
ಭಾರತ 2031 ರಲ್ಲಿ ತನ್ನ ಮುಂದಿನ ಮೌಲ್ಯಮಾಪನಕ್ಕೆ ಒಳಗಾಗಲಿದೆ. ಭಯೋತ್ಪಾದನಾ ದುರುಪಯೋಗದಿಂದ ಲಾಭರಹಿತ ವಲಯವನ್ನು ರಕ್ಷಿಸಲು ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯವಿದೆ ಎಂದು FATF ಹೇಳಿದೆ.
"ಭಾರತದ ಅಕ್ರಮ ಹಣ ವರ್ಗಾವಣೆಯ ಪ್ರಮುಖ ಮೂಲಗಳು ದೇಶದೊಳಗಿನ ಕಾನೂನುಬಾಹಿರ ಚಟುವಟಿಕೆಗಳಿಂದ ಹುಟ್ಟಿಕೊಂಡಿವೆ, ದೇಶ "ವಿವಿಧ" ಶ್ರೇಣಿಯ ಭಯೋತ್ಪಾದಕ ಬೆದರಿಕೆಗಳನ್ನು ಎದುರಿಸುತ್ತಿದೆ, ಹೆಚ್ಚು ಗಮನಾರ್ಹವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ISIL (ಇಸ್ಲಾಮಿಕ್ ಸ್ಟೇಟ್ ಅಥವಾ ISIS) ಅಥವಾ AQ-ಸಂಯೋಜಿತ ಗುಂಪುಗಳಿಂದ ( ಅಲ್ ಖೈದಾ) ಬೆದರಿಕೆಗಳನ್ನು ಎದುರಿಸುತ್ತಿದೆ ಎಂದು FATF ಹೇಳಿದೆ.