ಗಾಜಾ ನಗರ (ಪ್ಯಾಲೆಸ್ಟೈನ್): ಗಾಜಾ ನಗರದಲ್ಲಿ ಇಸ್ರೇಲ್ ಭಾನುವಾರ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಒಬ್ಬ ಪ್ರಮುಖ ವರದಿಗಾರ ಸೇರಿದಂತೆ ಇಬ್ಬರು ವರದಿಗಾರರು ಮತ್ತು ಮೂವರು ಕ್ಯಾಮೆರಾಮೆನ್‌ಗಳು ಸಾವನ್ನಪ್ಪಿದ್ದಾರೆ ಎಂದು ಅಲ್ ಜಜೀರಾ ಹೇಳಿದೆ.
ಗಾಝಾ ನಗರದಲ್ಲಿ ಪತ್ರಕರ್ತರಿಗೆ ವಸತಿ ಕಲ್ಪಿಸಲಾಗಿದ್ದ ಟೆಂಟ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಪರಿಣಾಮ ಅಲ್ ಜಜೀರಾದ ಪತ್ರಕರ್ತ ಅನಾಸ್ ಅಲ್-ಶರೀಫ್ ಜೊತೆಗೆ ನಾಲ್ವರು ಸಹೋದ್ಯೋಗಿಗಳು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.
ಮೃತರನ್ನು ಅನಾಸ್ ಅಲ್-ಶರೀಫ್, ಮೊಹಮ್ಮದ್ ಕ್ರೀಕೆಹ್ ಮತ್ತು ಕ್ಯಾಮೆರಾ ನಿರ್ವಾಹಕರಾದ ಇಬ್ರಾಹಿಂ ಜಹೀರ್, ಮೊಹಮ್ಮದ್ ನೌಫಲ್ ಮತ್ತು ಮೊವಾಮೆನ್ ಅಲಿವಾ ಎಂದು ಗುರುತಿಸಲಾಗಿದೆ.
ಅನಾಸ್ ಅಲ್-ಶರೀಫ್ ಪತ್ರಕರ್ತರಂತೆ ನಟಿಸುತ್ತಿದ್ದ. ಆದರೆ, ಆತ ನಿಜವಾಗಿ ಭಯೋತ್ಪಾದಕ ಎಂದು ಇಸ್ರೇಲ್ ಹೇಳಿಕೊಂಡಿದೆ.
ಅಲ್-ಶರೀಫ್ ಹಮಾಸ್ ಘಟಕದ ಮುಖ್ಯಸ್ಥನಾಗಿದ್ದ. ಇಸ್ರೇಲಿ ನಾಗರಿಕರು ಮತ್ತು ಐಡಿಎಫ್ (ಇಸ್ರೇಲಿ) ಪಡೆಗಳ ವಿರುದ್ಧ ರಾಕೆಟ್ ದಾಳಿಗಳನ್ನು ನಡೆಸುವ ಯೋಜನೆ ನಡೆಸಲಾಗಿತ್ತು. ಹೀಗಾಗಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ. ಸೇನೆಯು ಗಾಜಾದಲ್ಲಿ ಕಂಡುಬಂದ ಗುಪ್ತಚರ ಮತ್ತು ದಾಖಲೆಗಳನ್ನು ಪುರಾವೆಯಾಗಿ ಉಲ್ಲೇಖಿಸಿ ಹೇಳಿಕೆಯಲ್ಲಿ ತಿಳಿಸಿದೆ. ಈ ನಡುವೆ ಪತ್ರಕರ್ತರ ಹತ್ಯೆಯನ್ನು ಪತ್ರಕರ್ತರ ಗುಂಪುಗಳು ಮತ್ತು ಅಲ್ ಜಜೀರಾ ಖಂಡಿಸಿವೆ.
ಇನ್ನು ಸಾವಿಗೂ ಮುನ್ನ ಅಲ್-ಷರೀಫ್ ಪೋಸ್ಟ್ ಒಂದನ್ನು ಮಾಡಿದ್ದು, ಅದರಲ್ಲಿ ಸತ್ಯವನ್ನು ಜನರಿಗೆ ತಿಳಿಸಲು ಹೋರಾಡುತ್ತಿದ್ದೇನೆ. ಸಾವಿಗೂ ತಾನು ಹೆದರುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ನನ್ನ ಮಾತುಗಳು ನಿಮ್ಮನ್ನು ತಲುಪಿದರೆ, ಇಸ್ರೇಲ್ ನನ್ನನ್ನು ಕೊಲ್ಲುವಲ್ಲಿ ಮತ್ತು ನನ್ನ ಧ್ವನಿಯನ್ನು ಮೌನಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಯಿರಿ. ಮೊದಲಿಗೆ, ನಿಮ್ಮೆಲ್ಲರ ಮೇಲೆ ಶಾಂತಿ, ಕರುಣೆ ಮತ್ತು ಆಶೀರ್ವಾದವಿರಲಿ.
ಜಬಾಲಿಯಾ ನಿರಾಶ್ರಿತರ ಶಿಬಿರದ ಗಲ್ಲಿಗಳಲ್ಲಿ ಮತ್ತು ಬೀದಿಗಳಲ್ಲಿ ನನ್ನ ಬದುಕು ಆರಂಭವಾದಾಗಿನಿಂದ, ನನ್ನ ಜನರಿಗೆ ಧ್ವನಿ ಮತ್ತು ಶಕ್ತಿಯಾಗಿ ನಿಲ್ಲಲು ನಾನು ನನ್ನ ಸರ್ವ ಪ್ರಯತ್ನವನ್ನೂ ಅರ್ಪಿಸಿದ್ದೇನೆ ಎಂದು ಅಲ್ಲಾಹನಿಗೆ ತಿಳಿದಿದೆ. ಅತಿಕ್ರಮಿತ ಭೂಮಿ, ನನ್ನ ಮೂಲ ಪಟ್ಟಣ ಅಸ್ಖಲಾನ್ (ಅಲ್-ಮಜ್ದಲ್)ಗೆ ನನ್ನ ಕುಟುಂಬ ಮತ್ತು ಪ್ರೀತಿಪಾತ್ರರ ಜೊತೆಗೆ ಹಿಂತಿರುಗುವ ಆಸೆಯನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೆ. ಆದರೆ, ಅಲ್ಲಾಹನ ಇಚ್ಛೆಯು ಅನಿರೀಕ್ಷಿತವಾಗಿತ್ತು, ಆತನ ತೀರ್ಮಾನವೇ ಅಂತಿಮ.
ನೋವಿನ ಎಲ್ಲಾ ರೂಪಗಳನ್ನು ನಾನು ಅನುಭವಿಸಿದ್ದೇನೆ, ದುಃಖ ಮತ್ತು ನಷ್ಟವನ್ನು ಪದೇ ಪದೇ ಕಂಡಿದ್ದೇನೆ. ಆದರೂ, ಸತ್ಯವನ್ನು ಅದು ಇರುವಂತೆಯೇ, ಯಾವುದೇ ಬದಲಾವಣೆ ಅಥವಾ ಸುಳ್ಳಿಲ್ಲದೆ ಹೇಳಲು ನಾನು ಎಂದಿಗೂ ಹಿಂಜರಿಯಲಿಲ್ಲ. ನಮ್ಮ ಹತ್ಯೆಯನ್ನು ಒಪ್ಪಿಕೊಂಡ, ನಮ್ಮ ಉಸಿರುಗಳನ್ನು ಬಂಧಿಸಿದ, ನಮ್ಮ ಮಕ್ಕಳ ಮತ್ತು ಮಹಿಳೆಯರ ಛಿದ್ರಗೊಂಡ ದೇಹಗಳನ್ನು ನೋಡಿಯೂ ಹೃದಯ ಕರಗದ ಮತ್ತು ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ನಮ್ಮ ಜನರ ಮೇಲೆ ನಡೆಯುತ್ತಿರುವ ಈ ಮಾರಣಹೋಮವನ್ನು ನಿಲ್ಲಿಸದವರ ವಿರುದ್ಧ ಅಲ್ಲಾಹನು ಸಾಕ್ಷಿಯಾಗಿರುತ್ತಾನೆ ಎಂದು ನಾನು ನಂಬಿದ್ದೇನೆ.
ನಾನು ಪ್ಯಾಲೆಸ್ಟೈನ್ ಅನ್ನು ನಿಮ್ಮ ಕೈಗೆ ಒಪ್ಪಿಸುತ್ತೇನೆ. ಇದು ಮುಸ್ಲಿಂ ಪ್ರಪಂಚದ ಒಂದು ರತ್ನ ಮತ್ತು ಪ್ರತಿಯೊಬ್ಬ ಸ್ವತಂತ್ರ ಹೃದಯದ ಆಸೆಯಾಗಿದೆ. ಸಾವಿರಾರು ಟನ್‌ಗಳ ಇಸ್ರೇಲಿ ಬಾಂಬ್‌ಗಳಿಂದ ಹರಿದುಹೋದ ಅಮಾಯಕ ಮಕ್ಕಳ ದೇಹಗಳು ಮತ್ತು ಅಲ್ಲಿನ ಜನರ ಜವಾಬ್ದಾರಿಯನ್ನು ನಾನು ನಿಮಗೆ ವಹಿಸುತ್ತಿದ್ದೇನೆ. ಯಾವುದೇ ಬಂಧನಗಳು ನಿಮ್ಮನ್ನು ಮೌನವಾಗಿಸಬಾರದು. ನಮ್ಮ ನೆಲ ಮತ್ತು ಜನರಿಗೆ ಘನತೆ ಮತ್ತು ಸ್ವಾತಂತ್ರ್ಯ ದೊರೆಯುವವರೆಗೂ ಅವರನ್ನು ಬಿಡುಗಡೆಗೊಳಿಸುವ ಸೇತುವೆಯಾಗಿ ನೀವು ಇರಿ. ನನ್ನ ಪ್ರೀತಿಯ ಕುಟುಂಬವನ್ನು ನಿಮಗೆ ಒಪ್ಪಿಸುತ್ತಿದ್ದೇನೆ. ನನ್ನ ಕಣ್ಣಿನ ದೃಷ್ಟಿಯಂತಿದ್ದ ಮಗಳು ಶಮ್ಳನ್ನು ನಿಮಗೆ ವಹಿಸುತ್ತಿದ್ದೇನೆ, ಅವಳು ಬೆಳೆಯುವುದನ್ನು ನೋಡುವ ಆಸೆ ನನಗೆ ಈಡೇರಲಿಲ್ಲ. ನನ್ನ ಮಗ ಸಲಾಹ್‌ನನ್ನು ನಿಮಗೆ ಒಪ್ಪಿಸುತ್ತೇನೆ, ಅವನು ನನ್ನ ಜವಾಬ್ದಾರಿಯನ್ನು ಹೊರುವಷ್ಟು ಶಕ್ತಿಯುತನಾಗುವವರೆಗೆ ನಾನು ಅವನ ಬೆಂಬಲಕ್ಕೆ ನಿಲ್ಲಬೇಕಿತ್ತು.
ನನ್ನ ಶಕ್ತಿಯಾಗಿದ್ದ ಪ್ರೀತಿಯ ತಾಯಿಯನ್ನು ನಿಮಗೆ ಒಪ್ಪಿಸುತ್ತೇನೆ. ಜೀವನದುದ್ದಕ್ಕೂ ನನ್ನ ಜೊತೆಗಿದ್ದ ನನ್ನ ಪತ್ನಿ ಬಯಾನ್ಳನ್ನು ನಿಮಗೆ ವಹಿಸುತ್ತೇನೆ. ಯುದ್ಧವು ನಮ್ಮನ್ನು ದೂರಮಾಡಿದರೂ, ಅವಳು ದೃಢವಾಗಿ ಮತ್ತು ನಿಷ್ಠೆಯಿಂದ ಕುಟುಂಬವನ್ನು ನೋಡಿಕೊಂಡಳು. ದಯವಿಟ್ಟು ನೀವು ಎಲ್ಲರೂ ಸೇರಿ, ಅವರಿಗೆ ಅಲ್ಲಾಹನ ನಂತರ ದೊಡ್ಡ ಬೆಂಬಲವಾಗಿರಿ. ನನ್ನ ಅಂತ್ಯ ಸಂಭವಿಸಿದರೆ, ನನ್ನ ತತ್ವಗಳಿಗೆ ಬದ್ಧನಾಗಿ ಈ ಜಗತ್ತನ್ನು ಬಿಡುತ್ತೇನೆ. ಅಲ್ಲಾಹನ ಇಚ್ಛೆಯಿಂದ ನಾನು ತೃಪ್ತನಾಗಿದ್ದೇನೆ ಮತ್ತು ಆತನನ್ನು ಸೇರುವುದು ಶಾಶ್ವತ ಶಾಂತಿಯ ದಾರಿ ಎಂದು ನಾನು ನಂಬಿದ್ದೇನೆ. ಓ ಅಲ್ಲಾಹ್, ನನ್ನನ್ನು ಹುತಾತ್ಮನಾಗಿ ಸ್ವೀಕರಿಸು. ನನ್ನ ಭೂತ ಮತ್ತು ಭವಿಷ್ಯದ ಪಾಪಗಳನ್ನು ಕ್ಷಮಿಸು. ನನ್ನ ರಕ್ತದ ಹನಿಯು ನನ್ನ ಜನ ಮತ್ತು ಕುಟುಂಬದ ಸ್ವಾತಂತ್ರ್ಯಕ್ಕಾಗಿ ಪ್ರಕಾಶಿಸುವ ಬೆಳಕಾಗಲಿ. ಒಂದು ವೇಳೆ ನಾನು ಎಲ್ಲಿಯಾದರೂ ತಪ್ಪು ಮಾಡಿದ್ದರೆ ನನ್ನನ್ನು ಕ್ಷಮಿಸು. ನನ್ನ ಒಡಂಬಡಿಕೆಗೆ ನಾನು ಸದಾ ನಿಷ್ಠನಾಗಿದ್ದೇನೆ. ಗಾಜಾವನ್ನು ಮರೆಯಬೇಡಿ… ಮತ್ತು ನಿಮ್ಮ ಒಳ್ಳೆಯ ಪ್ರಾರ್ಥನೆಗಳಲ್ಲಿ ನನ್ನನ್ನು ದಯೆಯಿಂದ ನೆನಪಿಸಿಕೊಳ್ಳಿ ಎಂದು ಬರೆದಿದ್ದಾರೆ.