ವಾಷಿಂಗ್ಟನ್: ಅಮೆರಿಕದ ಮಿನ್ನಿಯಾಪೋಲಿಸ್ ನಗರದಲ್ಲಿ ನಡೆದ ಭೀಕರ ಗುಂಡಿನ ದಾಳಿ ನಡೆಸಿದ ದಾಳಿಕೋರ ತನ್ನ ಶಸ್ತ್ರಾಸ್ತ್ರಗಳ ಮೇಲೆ ಬರೆದಿದ್ದ ಶಾಕಿಂಗ್ ಬರಹಗಳು ಇದೀಗ ವ್ಯಾಪಕ ಚರ್ಚೆ ಮತ್ತು ಆತಂಕಕ್ಕೆ ಕಾರಣವಾಗಿದೆ.
ಹೌದು.. ಮಿನ್ನಿಯಾಪೋಲಿಸ್ ನಗರದಲ್ಲಿ ಚರ್ಚ್ ನಲ್ಲಿದ್ದ ಶಾಲಾ ಮಕ್ಕಳ ಮೇಲೆ ಬುಧವಾರ ಗುಂಡು ಹಾರಿಸಿ ಇಬ್ಬರು ವಿದ್ಯಾರ್ಥಿಗಳನ್ನು ಕೊಂದ ಶೂಟರ್, ತನ್ನ ಬಂದೂಕುಗಳ ಮೇಲೆ "ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲು" ಮತ್ತು "ನ್ಯೂಕ್ ಇಂಡಿಯಾ" ಎಂದು ಬರೆದಿರುವುದು ಬೆಳಕಿಗೆ ಬಂದಿದೆ. ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕುರಿತ ವೀಡಿಯೊ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಈ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ.
23 ವರ್ಷದ ರಾಬಿನ್ ವೆಸ್ಟ್‌ಮನ್ ಎಂದು ಗುರುತಿಸಲ್ಪಟ್ಟ ಶೂಟರ್, ರೈಫಲ್, ಶಾಟ್‌ಗನ್ ಮತ್ತು ಪಿಸ್ತೂಲ್ ಮೂರು ಆಯುಧಗಳನ್ನು ತನ್ನ ದಾಳಿಗೆ ಬಳಸಿದ್ದಾನೆ. ಅನನ್ಸಿಯೇಷನ್ ಕ್ಯಾಥೋಲಿಕ್ ಶಾಲೆಯ ಚರ್ಚ್ ಮೇಲೆ ಡಜನ್ಗಟ್ಟಲೆ ಸುತ್ತು ಗುಂಡು ಹಾರಿಸಿದ್ದಾನೆ. ನಂತರ ವೆಸ್ಟ್‌ಮನ್ ಪಾರ್ಕಿಂಗ್ ಸ್ಥಳದಲ್ಲಿ ಗುಂಡು ಹಾರಿಸಿಕೊಂಡು ಸತ್ತಿದ್ದಾನೆ ಎಂದು ಹೇಳಲಾಗಿದೆ.
ವಿಡಿಯೋ ವೈರಲ್ ಬೆನ್ನಲ್ಲೇ ಡಿಲೀಟ್
"ರಾಬಿನ್ ಡಬ್ಲ್ಯೂ" ಎಂಬ ಶೀರ್ಷಿಕೆಯ ಯೂಟ್ಯೂಬ್ ಚಾನೆಲ್‌ನಲ್ಲಿ ಈ ದಾಳಿಕೋರನ ಕುರಿತು ವಿಡಿಯೋ ಅಪ್ಲೋಡ್ ಮಾಡಲಾಗಿತ್ತು. ಆದರೆ ಈ ವಿಡಿಯೋ ವೈರಲ್ ಆಗುತ್ತಲೇ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಸುಮಾರು 10 ನಿಮಿಷಗಳಷ್ಟು ಸಮಯದ ವಿಡಿಯೋದಲ್ಲಿ ದಾಳಿಕೋರನ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಲೋಡ್ ಮಾಡಲಾದ ಮ್ಯಾಗಜಿನ್ ಗಳ ಸಂಗ್ರಹವನ್ನು ತೋರಿಸಲಾಗಿತ್ತು.
ಶಾಕಿಂಗ್ ಬರಹ
ತನ್ನ ಶಸ್ತ್ರಾಸ್ತ್ರಗಳ ಮೇಲೆ ದಾಳಿಕೋರ ಹಲವು ಬರಹಗಳನ್ನು ಬರೆದುಕೊಂಡಿದ್ದು, ಟ್ರಂಪ್ ರನ್ನು ಕೊಲ್ಲು, ಇಸ್ರೇಲ್ ನಾಶವಾಗಬೇಕು.. ಇಸ್ರೇಲ್ ಅನ್ನು ಸುಟ್ಟುಹಾಕು ಎಂದು ಮ್ಯಾಗಜಿನ್ ಗಳ ಮೇಲೆ ಬರೆಯಲಾಗಿದೆ. ಮಾತ್ರವಲ್ಲದೇ ಮತ್ತೊಂದು ಮ್ಯಾಗಜಿನ್ ಮೇಲೆ "ನ್ಯೂಕ್ ಇಂಡಿಯಾ" ಎಂದು ಬರೆಯಲಾಗಿದೆ. ಇದಲ್ಲದೆ "ನಿಮ್ಮ ದೇವರು ಎಲ್ಲಿದ್ದಾನೆ?" ಮತ್ತು "ಮಕ್ಕಳಿಗಾಗಿ" ಎಂದು ಬರೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ.