ಎರಡು ದಿನಗಳ ಜಪಾನ್ ಭೇಟಿ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ಎಸ್ ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾಕ್ಕೆ ತೆರಳಿದರು.
ತಮ್ಮ ಭೇಟಿಯ ಸಮಯದಲ್ಲಿ, ಭಾರತ ಮತ್ತು ಜಪಾನ್ 13 ಪ್ರಮುಖ ಒಪ್ಪಂದಗಳು ಮತ್ತು ಘೋಷಣೆಗಳನ್ನು ಮಾಡಿಕೊಂಡಿದ್ದು ಹಲವಾರು ಪರಿವರ್ತನಾ ಉಪಕ್ರಮಗಳ ಪ್ರಾರಂಭವನ್ನು ಘೋಷಿಸಿದವು.
ಜಪಾನ್ ಭೇಟಿ ಎರಡೂ ದೇಶಗಳ ಜನತೆಗೆ ಫಲಪ್ರದವಾಗಲಿದೆ ಎಂದು ಭಾವಿಸುತ್ತೇನೆ. ಪ್ರಧಾನಿ ಇಶಿಬಾ, ಜಪಾನಿನ ಜನರು ಮತ್ತು ಸರ್ಕಾರಕ್ಕೆ ಅವರು ತೋರಿದ ಪ್ರೀತಿ, ಆದರಗಳಿಗೆ ಧನ್ಯವಾದಗಳನ್ನು ಹೇಳುತ್ತೇನೆ" ಎಂದು ಪ್ರಧಾನಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಶಿಗೇರು ಇಶಿಬಾ ನಡುವಿನ ಶೃಂಗಸಭೆಯ ಮಾತುಕತೆಗಳ ನಂತರ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ಹೊಸ ಕ್ರಮಗಳನ್ನು ಅನಾವರಣಗೊಳಿಸಲಾಯಿತು.
ಜಪಾನ್ ಕಳೆದೊಂದು ದಶಕದಲ್ಲಿ ಭಾರತದಲ್ಲಿ 10 ಟ್ರಿಲಿಯನ್ ಯೆನ್ (ಸುಮಾರು 60,000 ಕೋಟಿ ರೂಪಾಯಿ) ಹೂಡಿಕೆ ಗುರಿಯನ್ನು ಹೊಂದಿತ್ತು.ಎರಡೂ ಕಡೆಯವರು ರಕ್ಷಣಾ ಸಂಬಂಧಗಳ ಚೌಕಟ್ಟು ಮತ್ತು ಆರ್ಥಿಕ ಪಾಲುದಾರಿಕೆಯನ್ನು ಹೆಚ್ಚಿಸಲು 10 ವರ್ಷಗಳ ಮಾರ್ಗಸೂಚಿ ಸೇರಿದಂತೆ ದೊಡ್ಡ ಒಪ್ಪಂದಗಳ ಪಟ್ಟಿಯನ್ನು ಮಾಡಿಕೊಂಡಿದ್ದಾರೆ.
ಅರೆವಾಹಕಗಳು, ಶುದ್ಧ ಇಂಧನ, ದೂರಸಂಪರ್ಕ, ಔಷಧಗಳು, ನಿರ್ಣಾಯಕ ಖನಿಜಗಳು ಮತ್ತು ಹೊಸ ಮತ್ತು ಪ್ರವರ್ಧಮಾನ ತಂತ್ರಜ್ಞಾನಗಳಂತಹ ಕಾರ್ಯತಂತ್ರದ ವಲಯಗಳಲ್ಲಿ ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸಲು ಆರ್ಥಿಕ ಭದ್ರತೆಗೆ ಸಹಿ ಹಾಕಲಾಗಿದೆ.
ಮೊನ್ನೆ ಶುಕ್ರವಾರ ಟೋಕಿಯೊಗೆ ಬಂದಿಳಿದ ಪ್ರಧಾನಿ, ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಭಾರತ-ಜಪಾನ್ ಸಹಕಾರವು ನಿರ್ಣಾಯಕವಾಗಿದೆ ಮತ್ತು ಪಾಲುದಾರಿಕೆಯಲ್ಲಿ ಹೊಸ ಮತ್ತು ಸುವರ್ಣ ಅಧ್ಯಾಯಕ್ಕೆ ಎರಡೂ ಕಡೆಯವರು ಅಡಿಪಾಯ ಹಾಕಿದ್ದಾರೆ ಎಂದು ಹೇಳಿದರು.
10 ವರ್ಷಗಳ ಮಾರ್ಗಸೂಚಿಯು ಒಟ್ಟಾರೆ ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ಆರ್ಥಿಕ ಭದ್ರತೆ, ಚಲನಶೀಲತೆ, ಪರಿಸರ ಸುಸ್ಥಿರತೆ, ತಂತ್ರಜ್ಞಾನ ಮತ್ತು ನಾವೀನ್ಯತೆ, ಆರೋಗ್ಯ, ಪರಸ್ಪರ ವಿನಿಮಯ ಮತ್ತು ಭಾರತೀಯ ರಾಜ್ಯಗಳು ಮತ್ತು ಜಪಾನಿನ ಪ್ರಾಂತ್ಯಗಳ ನಡುವೆ ಹಲವು ಸಂಬಂಧಗಳನ್ನು ಹೊಂದಿದೆ.
ಮುಂದಿನ ಎರಡು ದಿನಗಳ ಚೀನಾ ಭೇಟಿಯ ಸಂದರ್ಭದಲ್ಲಿ ಮೋದಿ ಅವರು ನಾಳೆ ಭಾನುವಾರ ಮತ್ತು ನಾಡಿದ್ದು ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ (SCO) ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.