ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅಂಗೈ ತೋರಿಸಿ ಅವಲಕ್ಷಣ ಎನಿಸಿಕೊಂಡಿದ್ದಾರೆ. ಸಾಮೂಹಿಕ ವಲಸೆಯು ಅಮೆರಿಕಾದ ಕನಸಿನ ಕಳ್ಳತನ" ಎಂದು ಹೇಳಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಂದು ವಿವಾದದ ಬಿರುಗಾಳಿ ಎಬ್ಬಿಸಿದ್ದಾರೆ.
ವಲಸಿಗರು ಅಮೆರಿಕಾದ ಕೆಲಸಗಾರರ ಅವಕಾಶಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಜೆಡಿ ವ್ಯಾನ್ಸ್, ಸಾಮೂಹಿಕ ವಲಸೆಯು ಅಮೆರಿಕ ಕನಸಿನ ಕಳ್ಳತನವಾಗಿದೆ. ಇದು ಯಾವಾಗಲೂ ಹೀಗೆಯೇ ಇದೆ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಗೆ ವಿಡಿಯೋ ಮೂಲಕ ಪ್ರತಿಕ್ರಿಯಿಸಿರುವ ಲೂಯಿಸಿಯಾನ ನಿರ್ಮಾಣ ಕಂಪನಿಯ ಮಾಲೀಕರು, US ವಲಸೆ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ರಾಜ್ಯದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದಾಗಿನಿಂದ ತಾನು ನಾಟಕೀಯ ಬದಲಾವಣೆಯನ್ನು ಕಂಡಿದ್ದೇನೆ. ಯಾವುದೇ ವಲಸಿಗರು ಕೆಲಸಕ್ಕೆ ಹೋಗಲು ಬಯಸುವುದಿಲ್ಲ. ಇದು ತುಂಬಾ ಅದ್ಭುತವಾಗಿದೆ. ನಾನು ಕಳೆದ 3 ತಿಂಗಳುಗಳಲ್ಲಿ ಪಡೆದಿದ್ದಕ್ಕಿಂತ ಕಳೆದ ವಾರದಲ್ಲಿ ಹೆಚ್ಚು ಕರೆಗಳನ್ನು ಪಡೆದುಕೊಂಡಿದ್ದೇನೆ ಅವರು ಹೇಳಿದ್ದಾರೆ.
ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಾನ್ಸ್ ಅವರ ಕುಟುಂಬವನ್ನು ಉಲ್ಲೇಖಿಸಿ, ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ವ್ಯಾನ್ಸ್ ಅವರ ಪತ್ನಿ ಉಷಾ ವ್ಯಾನ್ಸ್ ಭಾರತೀಯರಾಗಿದ್ದು, ಅವರಿಗೆ ಇಬ್ಬರು ಮಕ್ಕಳಾದ ಇವಾನ್, ವಿವೇಕ್ ಮತ್ತು ಮಗಳು ಮೀರಾಬೆಲ್ ಇದ್ದಾರೆ. ನಿಮ್ಮ ಪತ್ನಿ ಭಾರತ ವಲಸೆ ಕುಟುಂಬದಿಂದ ಬಂದವಳಲ್ಲವೇ? ಎಂದು ಕೆಲವರು ಪ್ರಶ್ನಿಸಿದ್ದಾರೆ.
ಹಲವರು "ನಿಮ್ಮ ಭಾರತೀಯ ಮೂಲದ ಪತ್ನಿ, ಉಷಾ ವ್ಯಾನ್ಸ್ ಮತ್ತು ನಿಮ್ಮ ದ್ವಿಜನಾಂಗೀಯ ಮಕ್ಕಳನ್ನೂ ಭಾರತಕ್ಕೆ ಗಡಿಪಾರು ಮಾಡಿ. ನೀವು ಅವರಿಗಾಗಿ ವಿಮಾನದ ಟಿಕೆಟ್ ಬುಕ್ ಮಾಡಿದಾಗ ನಮಗೆ ತಿಳಿಸಿ" ಎಂದು ತಿರುಗೇಟು ನೀಡಿದ್ದಾರೆ.
ಜೆಡಿ ವ್ಯಾನ್ಸ್, ತಮ್ಮ ಭಾರತೀಯ ಮೂಲದ ಪತ್ನಿ ಮತ್ತು ಮಕ್ಕಳನ್ನು ಭಾರತಕ್ಕೆ ವಾಪಸ್ ಕಳುಹಿಸಿ ಇತರರಿಗೆ ಮಾದರಿಯಾಗಬೇಕು" ಎಂದು ಓರ್ವ ಎಕ್ಸ್ ಬಳಕೆದಾರ ಜೆಡಿ ವ್ಯಾನ್ಸ್ ಅವರ ಎಕ್ಸ್ ಪೋಸ್ಟ್‌ಗೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಲಸೆಗೆ ಸಂಬಂಧಿಸಿದಂತೆ ಜೆಡಿ ವ್ಯಾನ್ಸ್ ದ್ವಂದ್ವ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಪತ್ನಿ ಉಷಾ ಕ್ರಿಶ್ಚಿಯನ್ ಧರ್ಮ ಸೇರಬೇಕು ಎಂದು ಹೇಳಿದ್ದ ಅವರು, ಮರುದಿನವೇ "ಉಷಾ ಅವರಿಗೆ ಮತಾಂತರಗೊಳ್ಳುವ ಯೋಚನೆ ಇಲ್ಲ" ಎಂದು ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದರು. ಅವರ ಈ ದ್ವಂದ್ವ ನಿಲುವು ಅನೇಕ ಬಾರಿ ನಗೆಪಾಟಲಿಗೆ ಇಡಾಗಿದೆ.