ಲಿಬಿಯಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಲಿ ಅಹ್ಮದ್ ಅಲ್-ಹದ್ದಾದ್ ಮತ್ತು ಇತರ ನಾಲ್ವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಟರ್ಕಿಯ ರಾಜಧಾನಿ ಅಂಕಾರಾಗೆ ಅಧಿಕೃತ ಭೇಟಿ ಬಳಿಕ ಹಿಂತಿರುಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಮೊಹಮ್ಮದ್ ಅಲಿ ಅಹ್ಮದ್ ಅಲ್-ಹದ್ದಾದ್ ಮತ್ತು ಇತರ ನಾಲ್ವರು ಮಿಲಿಟರಿ ಅಧಿಕಾರಿಗಳು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಲಿಬಿಯಾದ ಪ್ರಧಾನಿ ಅಬ್ದುಲ್ಹಮಿದ್ ದ್ಬೈಬಾ ಹೇಳಿದ್ದಾರೆ.
ಈ ಘಟನೆ ಅತ್ಯಂತ ದುಃಖಕರ ಮತ್ತು ನೋವಿನಿಂದ ಕೂಡಿದೆ ಎಂದು ಪ್ರಧಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದು ದೇಶ, ಸೇನೆ ಮತ್ತು ಇಡೀ ಲಿಬಿಯಾ ಸಮಾಜಕ್ಕೆ ದೊಡ್ಡ ನಷ್ಟ ಎಂದು ಅವರು ಬಣ್ಣಿಸಿದ್ದಾರೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಲಿಬಿಯಾದ ನೆಲದ ಪಡೆಗಳ ಕಮಾಂಡರ್, ಮಿಲಿಟರಿ ನಿರ್ಮಾಣ ಪ್ರಾಧಿಕಾರದ ನಿರ್ದೇಶಕ, ಮುಖ್ಯಸ್ಥರ ಸಲಹೆಗಾರ ಮತ್ತು ಅವರ ಕಚೇರಿಯ ಛಾಯಾಗ್ರಾಹಕ ಕೂಡ ವಿಮಾನದಲ್ಲಿದ್ದರು ಎಂದು ದ್ಬೈಬಾ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 8:10ಕ್ಕೆ ಅಂಕಾರಾ ವಿಮಾನ ನಿಲ್ದಾಣದಿಂದ ವಿಮಾನ ಹೊರಟಿತು ಎಂದು ಟರ್ಕಿಯ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಹೇಳಿದ್ದಾರೆ. ರಾತ್ರಿ 8:52ಕ್ಕೆ ವಿಮಾನದೊಂದಿಗಿನ ರೇಡಿಯೋ ಸಂಪರ್ಕ ಕಡಿತಗೊಂಡಿತು. ನಂತರ ಅಧಿಕಾರಿಗಳು ಅಂಕಾರಾದ ಹೇಮನಾ ಜಿಲ್ಲೆಯ ಕೆಸಿಕಾವಾಕ್ ಗ್ರಾಮದ ಬಳಿ ವಿಮಾನದ ಅವಶೇಷಗಳನ್ನು ಕಂಡುಕೊಂಡರು. ಅಪಘಾತದ ಕಾರಣ ಪ್ರಸ್ತುತ ಸ್ಪಷ್ಟವಾಗಿಲ್ಲ. ಅಪಘಾತದ ತನಿಖೆ ನಡೆಯುತ್ತಿದೆ ಎಂದು ಟರ್ಕಿಶ್ ನ್ಯಾಯ ಸಚಿವ ಯಿಲ್ಮಾಜ್ ಟಂಕ್ ಹೇಳಿದ್ದಾರೆ. ಏತನ್ಮಧ್ಯೆ, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಲಿಬಿಯಾ ಪ್ರಧಾನಿ ರಕ್ಷಣಾ ಸಚಿವರಿಗೆ ಅಂಕಾರಾಗೆ ಅಧಿಕೃತ ನಿಯೋಗವನ್ನು ಕಳುಹಿಸಲು ಸೂಚಿಸಿದ್ದಾರೆ ಎಂದು ಟ್ರಿಪೋಲಿ ಮೂಲದ ರಾಷ್ಟ್ರೀಯ ಏಕತಾ ಸರ್ಕಾರ ತಿಳಿಸಿದೆ.
ವಿಮಾನದ ಕೊನೆಯ ಸಿಗ್ನಲ್ ಇರುವ ಸ್ಥಳದ ಬಳಿ ಪ್ರಕಾಶಮಾನವಾದ ಬೆಳಕು ಮತ್ತು ಸ್ಫೋಟದಂತಹ ದೃಶ್ಯವನ್ನು ತೋರಿಸುವ ಚಿತ್ರಗಳನ್ನು ಹಲವಾರು ಟರ್ಕಿಶ್ ಮಾಧ್ಯಮ ಚಾನೆಲ್‌ಗಳು ಪ್ರಸಾರ ಮಾಡಿವೆ. ಲಿಬಿಯಾದ ಸಂವಹನ ಮತ್ತು ರಾಜಕೀಯ ವ್ಯವಹಾರಗಳ ರಾಜ್ಯ ಸಚಿವ ವಾಲಿದ್ ಎಲ್ಲಾಫಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದು, ಟರ್ಕಿಶ್ ಸರ್ಕಾರವು ಘಟನೆಯ ಬಗ್ಗೆ ಲಿಬಿಯಾ ಸರ್ಕಾರಕ್ಕೆ ತಿಳಿಸಿದೆ.
ಮೊಹಮ್ಮದ್ ಅಲಿ ಅಹ್ಮದ್ ಅಲ್-ಹದ್ದಾದ್ ಆಗಸ್ಟ್ 2020ರಿಂದ ಲಿಬಿಯಾ ಸೇನೆಯ ಜನರಲ್ ಸ್ಟಾಫ್ ಮುಖ್ಯಸ್ಥರಾಗಿದ್ದರು. ಅವರನ್ನು ಅಂದಿನ ಪ್ರಧಾನಿ ಫಯೇಜ್ ಅಲ್-ಸರ್ರಾಜ್ ಈ ಸ್ಥಾನಕ್ಕೆ ನೇಮಿಸಿದರು. ಈ ದುರಂತ ಘಟನೆಯ ನಂತರ, ಲಿಬಿಯಾ ಸರ್ಕಾರವು ದೇಶಾದ್ಯಂತ ಮೂರು ದಿನಗಳ ಅಧಿಕೃತ ಶೋಕಾಚರಣೆಯನ್ನು ಘೋಷಿಸಿದೆ.