ಬಾಂಗ್ಲಾದೇಶದ ಜನಪ್ರಿಯ ಗಾಯಕ ಜೇಮ್ಸ್ 
ವಿದೇಶ

ಬಾಂಗ್ಲಾದಲ್ಲಿ ಜಿಹಾದಿಗಳ ಅಟ್ಟಹಾಸ: ಗಾಯಕ ಜೇಮ್ಸ್ ಸಂಗೀತ ಕಚೇರಿಯ ಮೇಲೆ ದಾಳಿ, 25ಕ್ಕೂ ಹೆಚ್ಚು ಜನರಿಗೆ ಗಾಯ

ಜೇಮ್ಸ್ ಬಾಂಗ್ಲಾದೇಶದ ಪ್ರಸಿದ್ಧ ಹಿನ್ನೆಲೆ ಗಾಯಕ, ಗಿಟಾರ್ ವಾದಕ ಮತ್ತು ಗೀತ ರಚನೆಕಾರರಾಗಿದ್ದು, ಹಲವಾರು ಹಿಂದಿ ಚಲನಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ.

ಢಾಕಾ: ಬಾಂಗ್ಲಾದೇಶದಲ್ಲಿ ಜಿಹಾದಿಗಳು ಅಟ್ಟಹಾಸ ಮೆರೆಯುತ್ತಿದ್ದು, ಕಲಾವಿದರು, ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಪ್ರಗತಿಪರ ಚಿಂತಕರ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳು ಮುಂದುವರಿದಿದೆ. ಫರೀದ್‌ಪುರದಲ್ಲಿ ನಡೆಯಬೇಕಿದ್ದ ಜನಪ್ರಿಯ ಗಾಯಕ ಜೇಮ್ಸ್ ಅವರ ಸಂಗೀತ ಕಾರ್ಯಕ್ರಮದ ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಇದೀಗ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಗಿದೆ.

ಫರೀದ್‌ಪುರ ಜಿಲ್ಲಾ ಶಾಲೆಯ 185 ನೇ ವಾರ್ಷಿಕೋತ್ಸವದ ಅಂಗವಾಗಿ ಸಂಗೀತ ಕಚೇರಿಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಶುಕ್ರವಾರ ರಾತ್ರಿ 9.30 ಗಂಟೆ ಸುಮಾರಿಗೆ ನಡೆಯಬೇಕಿತ್ತು, ಈ ವೇಳೆ ಇದ್ದಕ್ಕಿದ್ದಂತೆ ಗುಂಪೊಂದು ಸ್ಥಳಕ್ಕೆ ನುಗ್ಗಿ ಕಚೇರಿಯಲ್ಲಿ ಭಾಗವಹಿಸುತ್ತಿದ್ದವರ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆಯಲು ಪ್ರಾರಂಭಿಸಿದ್ದಾರೆ.

ಇದರಿಂದಾಗಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆ ಬಳಿಕ ಸಂಗೀತ ಕಚೇರಿಯನ್ನು ರದ್ದುಗೊಳಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಜೇಮ್ಸ್ ಬಾಂಗ್ಲಾದೇಶದ ಪ್ರಸಿದ್ಧ ಹಿನ್ನೆಲೆ ಗಾಯಕ, ಗಿಟಾರ್ ವಾದಕ ಮತ್ತು ಗೀತ ರಚನೆಕಾರರಾಗಿದ್ದು, ಹಲವಾರು ಹಿಂದಿ ಚಲನಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ.

ಈ ನಡುವೆ ಘಟನೆಯನ್ನು ಲೇಖಕಿ ತಸ್ಲೀಮಾ ನಸ್ರೀನ್ ತೀವ್ರವಾಗಿ ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಾಂಸ್ಕೃತಿಕ ಕೇಂದ್ರವಾದ ಛಾಯಾನಾಟ್ ಮತ್ತು ಜಾತ್ಯತೀತ ಪ್ರಜ್ಞೆ ಮೂಡಿಸುತ್ತಿದ್ದ ಉದೀಚಿ ಸಂಘಟನೆಗಳನ್ನು ಸುಟ್ಟು ಭಸ್ಮ ಮಾಡಲಾಗಿದೆ. ಇಂದು ಜಿಹಾದಿಗಳು ಖ್ಯಾತ ಗಾಯಕ ಜೇಮ್ಸ್ ಅವರನ್ನೂ ಹಾಡಲು ಬಿಡಲಿಲ್ಲ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಭಾರತದ ಖ್ಯಾತ ಸಂಗೀತಗಾರರಾದ ಸಿರಾಜ್ ಅಲಿ ಖಾನ್ ಮತ್ತು ಅರ್ಮಾನ್ ಖಾನ್ ಅವರು ಬಾಂಗ್ಲಾದೇಶದಲ್ಲಿ ಕಲಾವಿದರಿಗೆ ಸುರಕ್ಷತೆ ಇಲ್ಲ ಎಂಬ ಕಾರಣಕ್ಕೆ ಅಲ್ಲಿನ ಆಹ್ವಾನವನ್ನು ತಿರಸ್ಕರಿಸಿರುವುದು ದೇಶದ ಸಾಂಸ್ಕೃತಿಕ ಅವನತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದ್ದಾರೆ.

ಪ್ರೋಥೋಮ್ ಅಲೋ ದಿನಪತ್ರಿಕೆಯ ಪ್ರಕಾರ, ಸಂಗೀತ ಕಚೇರಿಯ ಬಗ್ಗೆ ತಿಳಿದ ನಂತರ ಹೆಚ್ಚಿನ ಸಂಖ್ಯೆಯ ನೋಂದಾಯಿಸದ ಹೊರಗಿನವರು ಸ್ಥಳದಲ್ಲಿ ಜಮಾಯಿಸಿದರು. ಕಾರ್ಯಕ್ರಮವು ನೋಂದಾಯಿತ ಪ್ರಸ್ತುತ ಮತ್ತು ಮಾಜಿ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಸಂಘಟಕರು ತಿಳಿಸಿದರು.

ಗುಂಪಿಗೆ ಪ್ರವೇಶ ನಿರಾಕರಿಸಿದಾಗ, ಗೋಡೆಗಳನ್ನು ಏರಿ ಒಳ ಪ್ರವೇಶಿಸಲು ಪ್ರಯತ್ನಿಸಿದರು, ಇಟ್ಟಿಗೆಗಳು ಮತ್ತು ಕಲ್ಲುಗಳನ್ನು ಎಸೆದರು ಮತ್ತು ವೇದಿಕೆಯನ್ನು ಧ್ವಂಸ ಮಾಡಲು ಪ್ರಯತ್ನಿಸಿದರು ಎಂದು ತಿಳಿದುಬಂದಿದೆ.

ರಾತ್ರಿ 10:00 ಗಂಟೆ ಸುಮಾರಿಗೆ, ಕಾರ್ಯಕ್ರಮಸಂಘಟನಾ ಸಮಿತಿಯ ಸಂಚಾಲಕ ಮುಸ್ತಾಫಿಜುರ್ ರೆಹಮಾನ್ ಶಮೀಮ್ ಅವರು, ಭದ್ರತಾ ಪರಿಸ್ಥಿತಿ ಹದಗೆಟ್ಟ ಕಾರಣ ಫರೀದ್‌ಪುರ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಜೇಮ್ಸ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿದರು.

ಪ್ರಚಾರ ಮತ್ತು ಮಾಧ್ಯಮ ಉಪ ಸಮಿತಿಯ ಸಂಚಾಲಕ ರಾಜಿಬುಲ್ ಹಸನ್ ಖಾನ್ ಅವರು ಮಾತನಾಡಿ, ಹಿಂಸಾಚಾರದಲ್ಲಿ ಕನಿಷ್ಠ 15 ರಿಂದ 20 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಸಂಗೀತ ಕಚೇರಿಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು, ಆದರೆ ದಾಳಿಯನ್ನು ಯಾರು ಅಥವಾ ಏಕೆ ನಡೆಸಿದರು ಎಂಬುದು ನಮಗೆ ಇನ್ನೂ ಅರ್ಥವಾಗುತ್ತಿಲ್ಲ. ಜಿಲ್ಲಾಡಳಿತದ ಆದೇಶದ ಮೇರೆಗೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು ಎಂದು ತಿಳಿಸಿದ್ದಾರೆ.

1840 ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಸ್ಥಾಪನೆಯಾದ ಫರೀದ್‌ಪುರ ಜಿಲ್ಲಾ ಶಾಲೆಯು ಬಾಂಗ್ಲಾದೇಶದ ಅತ್ಯಂತ ಹಳೆಯ ಸರ್ಕಾರ ನಡೆಸುತ್ತಿರುವ ಶಾಲೆಗಳಲ್ಲಿ ಒಂದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಹಿರಂಗವಾಗಿ BJP- RSS ಹೊಗಳಿ, 'ವಿವಾದದ ಕಿಡಿ' ಹೊತ್ತಿಸಿದ ದಿಗ್ವಿಜಯ್ ಸಿಂಗ್!

ಅನಧಿಕೃತ ಮನೆ ಕಳೆದುಕೊಂಡ ಮುಸ್ಲಿಂ ಜನರಿಗಾಗಿ ಮಿಡಿದ ಕೇರಳ ಸರ್ಕಾರ, ಬೆಂಗಳೂರಿನ ಕೋಗಿಲು ಲೇಔಟ್‌ಗೆ ಭೇಟಿ ಕೊಟ್ಟ MP ಎಎ ರಹೀಮ್!

ಐಪಿಎಲ್ ಆರಂಭಕ್ಕೂ ಮುನ್ನವೇ RCBಗೆ ಆಘಾತ, ತಂಡದ ಸ್ಟಾರ್ ಆಲ್ರೌಂಡರ್ ಗಾಯ, ಟೂರ್ನಿ ಆಡೋದೇ ಡೌಟ್!

CWC meet: 2026 ರ ಚುನಾವಣೆ ಕಾರ್ಯತಂತ್ರ, G-RAM G ಕಾನೂನು ಚರ್ಚೆ, ಇಂದಿನ ಸಭೆಯ ಅಜೆಂಡಾ...

'ಜೀವ ಬೆದರಿಕೆ.. ದಯವಿಟ್ಟು ರಕ್ಷಣೆ ಕೊಡಿ': ಬಿಹಾರ ಸರ್ಕಾರಕ್ಕೆ ಲಾಲೂ ಪುತ್ರ Tej Pratap ಪತ್ರ!

SCROLL FOR NEXT