ಮಾಸ್ಕೋ: ರಷ್ಯಾ-ಉಕ್ರೇನ್ ಯುದ್ಧ ನಡುವೆಯೇ ರಷ್ಯಾ ಸೇನೆಗೆ ಸೇರಿದ್ದ 10 ಭಾರತೀಯರ ಹತ್ಯೆಯಾಗಿದ್ದು ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಈ ಕುರಿತು ರಷ್ಯಾಗೆ ತೆರಳಿದ್ದ ಭಾರತ ಮೂಲದ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದು, ಅವರು ರಷ್ಯಾಗೆ ತೆರಳಿ ನಾಪತ್ತೆಯಾಗಿದ್ದ ತಮ್ಮ ಸಹೋದರನ ಪತ್ತೆಗಾಗಿ ತೆರಳಿದ್ದರು. ರಷ್ಯಾ ಸೇನೆಯಲ್ಲಿದ್ದ ಸುಮಾರು 10 ಮಂದಿ ಭಾರತ ಮೂಲದವರು ಉಕ್ರೇನ್ ಜೊತೆಗಿನ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಇದು ರಷ್ಯಾ ಸೇನೆಯಲ್ಲಿರುವ ಇತರೆ ಭಾರತೀಯ ಸಮುದಾಯದಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.
ರಷ್ಯಾದಲ್ಲಿ ಮೃತಪಟ್ಟವರ 10 ಮಂದಿಯ ಪೈಕಿ ಮೂವರು ಪಂಜಾಬ್‌ನವರು. ಉಳಿದವರು ಜಮ್ಮು ಹಾಗೂ ಉತ್ತರ ಪ್ರದೇಶದವರು ಎಂದು ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಯಾವ ಕಾರಣಕ್ಕಾಗಿ ಹತ್ಯೆಯಾಗಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿಯಬೇಕಾಗಿದೆ.
ಭಾರತೀಯರು ಮೃತಪಟ್ಟಿರುವುದನ್ನು ದೃಢೀಕರಿಸುವ ಕೆಲವು ದಾಖಲೆಗಳನ್ನು ರಾಜ್ಯಸಭಾ ಸದಸ್ಯ ಬಲ್ಬರ್ ಸಿಂಗ್ ಸೀಚೆವಾಲ್ ಅವರ ಕಚೇರಿಗೆ ತಲುಪಿಸಿರುವುದಾಗಿ ತಿಳಿಸಿರುವ ಜಲಂಧರ್‌ನ ಗೊರಯಾ ನಿವಾಸಿ ಜಗದೀಪ್ ಕುಮಾರ್, ಭಾರತದ ಒಟ್ಟು ನಾಲ್ವರು ರಷ್ಯಾದಲ್ಲಿ ನಾಪತ್ತೆಯಾಗಿದ್ದಾರೆ ಎಂದೂ ಹೇಳಿದ್ದಾರೆ. ರಷ್ಯಾ ಸೇನೆಗೆ ಭಾರತದ ಯುವಕರ ನೇಮಕಾತಿಯನ್ನು ಸಂಪೂರ್ಣ ನಿಲ್ಲಿಸಲು ಕೇಂದ್ರ ತನ್ನ ಪ್ರಭಾವ ಬಳಸಬೇಕು ಎಂದು ಸೀಚೆವಾಲ್ ಅವರೂ ಮನವಿ ಮಾಡಿದ್ದರು.
ರಷ್ಯಾ ಸೇನೆ ಭಾರತೀಯರ ನೇಮಕ ನಿಲ್ಲಿಸಬೇಕು ಎಂದಿದ್ದ ಭಾರತ
ಈ ಹಿಂದೆ ರಷ್ಯಾ ಸೇನೆಗೆ ಭಾರತೀಯರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಸೇನೆಯಲ್ಲಿರುವ ಎಲ್ಲ ಭಾರತೀಯರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಭಾರತ ಸೆಪ್ಟೆಂಬರ್‌ನಲ್ಲಿ ರಷ್ಯಾಗೆ ಒತ್ತಾಯಿಸಿತ್ತು. ಹಾಗೆಯೇ, ಆಮಿಷಗಳಿಗೆ ಒಳಗಾಗದೆ, ಮುಂದೆ ಎದುರಾಗಬಹುದಾದ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ರಷ್ಯಾ ಸೇನೆಗೆ ಸೇರದಂತೆ ಭಾರತೀಯರಿಗೂ ಎಚ್ಚರಿಸಿತ್ತು.
‘ಸೀಚೆವಾಲ್ ಅವರನ್ನು 2024ರ ಜೂನ್ 29ರಂದು ಮೊದಲ ಸಲ ಭೇಟಿಯಾಗಿದ್ದೆ. ಆ ವೇಳೆ, ರಷ್ಯಾ ಸೇನೆಯ ವಶದಲ್ಲಿರುವ ನನ್ನ ಸಹೋದರ ಮಂದೀಪ್ ಕುಮಾರ್ ಮತ್ತು ಇತರ ಭಾರತೀಯ ಯುವಕರನ್ನು ಸುರಕ್ಷಿತವಾಗಿ ವಾಪಸ್ ಕರೆಸುವಂತೆ ಮನವಿ ಮಾಡಿದ್ದೆ’ ಎಂದು ಜಗದೀಪ್ ಹೇಳಿದ್ದಾರೆ.
ಸೀಚೆವಾಲ್ ಅವರು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿಯಾಗಿ, ಭಾರತೀಯರನ್ನು ಸುರಕ್ಷಿತವಾಗಿ ಕರೆತರುವಂತೆ ವಿನಂತಿಸಿದ್ದರು. ಈ ಸಂಬಂಧ ಪತ್ರವನ್ನೂ ಬರೆದಿದ್ದ ಅವರು, ರಷ್ಯಾದಲ್ಲಿ ಮೃತಪಟ್ಟ ಯುವಕರ ಶವಗಳನ್ನು ದೇಶಕ್ಕೆ ತರುವಂತೆ ಹಾಗೂ ಅವರವರ ಕುಟುಂಬಗಳಿಗೆ ಹಸ್ತಾಂತರಿಸುವಂತೆ ಕೋರಿದ್ದರು. ಹಾಗೆಯೇ, ಯುವಕರಿಗೆ ಆಮಿಷ ಒಡ್ಡುತ್ತಿರುವವರೆ ವಿರುದ್ಧ ಕಠಿಣ ಕ್ರಮಕ್ಕೂ ಒತ್ತಾಯಿಸಿದ್ದರು. ಸೀಚೆವಾಲ್ ಆರಂಭದಿಂದಲೂ ಸಂತ್ರಸ್ತ ಕುಟುಂಬಗಳಿಗೆ ನೆರವಾಗುತ್ತಿದ್ದಾರೆ. ಅವರ ಶ್ರಮದ ಫಲವಾಗಿ ಹಲವು ಯುವಕರು ತಮ್ಮ ಕುಟುಂಬಗಳನ್ನು ಸೇರಿಕೊಂಡಿದ್ದಾರೆ ಎನ್ನುತ್ತಾ, ಸಂಸದರಿಗೆ ಧನ್ಯವಾದ ತಿಳಿಸಿದ್ದಾರೆ.
ರಷ್ಯಾಗೆ ತೆರಳಲು ನಿರ್ಧಾರ
ರಷ್ಯಾದ ಟ್ರಾವೆಲ್ ಏಜೆಂಟ್ ಒಬ್ಬರು ಸೇನೆಗೆ ಸೇರುವಂತೆ ತಮ್ಮ ಸಹೋದರನನ್ನು ಒತ್ತಾಯಿಸಿದ್ದರು. ಕುಟುಂಬದವರು ಆತನೊಂದಿಗೆ ಕೊನೇ ಸಲ ಮಾತನಾಡಿದ್ದು 2024ರ ಮಾರ್ಚ್‌ನಲ್ಲಿ. ಅದಾದ ನಂತರ, ಆತನ ಬಗ್ಗೆ ಯಾವುದೇ ಮಾಹಿತಿ ಸಿಗದ ಕಾರಣ, ರಷ್ಯಾಗೆ ತೆರಳಲು ನಿರ್ಧರಿಸಿದ್ದಾಗಿ ಜಗದೀಪ್ ವಿವರಿಸಿದ್ದಾರೆ.
ಎರಡು ಬಾರಿ ರಷ್ಯಾಗೆ ಹೋಗಿದ್ದ ಎಂದಿರುವ ಜಗದೀಪ್, ಸೀಚೆವಾಲ್ ಅವರು ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟಿದ್ದರು. ಹಾಗೆಯೇ, ಅಲ್ಲಿ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಪತ್ರವನ್ನೂ ನೀಡಿದ್ದರು. ಮೊದಲ ಸಲ ಹೋದಾಗ 21 ದಿನ ತಂಗಿದ್ದೆ. ಮತ್ತೊಮ್ಮೆ ಹೋದಾಗ ಎರಡು ತಿಂಗಳು ಉಳಿದುಕೊಂಡು, ಭಾರತೀಯರಿಗಾಗಿ ಹುಡುಕಾಟ ನಡೆಸಿ, ಕೆಲವು ಮಾಹಿತಿ ಸಂಗ್ರಹಿಸಿದ್ದೆ. ಭಾಷೆ ಗೊತ್ತಿಲ್ಲದ ಕಾರಣ ಕೆಲವು ಸಮಸ್ಯೆಗಳು ಎದುರಾದವು ಎಂದು ವಿವರಿಸಿದ್ದಾರೆ.