ನವದೆಹಲಿ: 2026 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚಿನ ಭಯೋತ್ಪಾದನಾ ಚಟುವಟಿಕೆಯಿಂದ 'ಸಶಸ್ತ್ರ ಸಂಘರ್ಷ'ನಡೆಯುವ ಸಾಧ್ಯತೆಯಿದೆ ಎಂದು ಯುಎಸ್ ಥಿಂಕ್ ಟ್ಯಾಂಕ್ ವರದಿ ಹೇಳಿದೆ.
ಅಮೆರಿಕದ ವಿದೇಶಾಂಗ ನೀತಿಯ ಸರ್ವೇ ಮಾಡಿದ ವಿದೇಶಾಂಗ ವ್ಯವಹಾರಗಳ ಸಮಿತಿ (CFR) ವರದಿಯಲ್ಲಿ ಟ್ರಂಪ್ ಆಡಳಿತ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವಿನ ಸಂಘರ್ಷವನ್ನು ಅಂತ್ಯಗೊಳಿಸಲು ಪ್ರಯತ್ನಿಸಿದೆ ಎಂದು ಹೇಳಿದೆ.
ಎರಡನೇ ಬಾರಿಗೆ ಟ್ರಂಪ್ ಅಧ್ಯಕ್ಷರಾದ ನಂತರ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಗಾಜಾ ಪಟ್ಟಿ ಮತ್ತು ಉಕ್ರೇನ್, ಹಾಗೆಯೇ ಭಾರತ ಮತ್ತು ಪಾಕಿಸ್ತಾನ, ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವೆ ನಡೆಯುತ್ತಿರುವ ಅನೇಕ ಸಂಘರ್ಷಗಳನ್ನು ಕೊನೆಗೊಳಿಸಲು ಪ್ರಯತ್ನಿಸಿದೆ ಎಂದು ವರದಿ ಹೇಳಿದೆ.
ಈ ವರ್ಷದ ಮೇ ತಿಂಗಳಲ್ಲಿ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಆರಂಭಿಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಣ ಮೂರು ದಿನಗಳ ಸೇನಾ ಸಂಘರ್ಷ ನಡೆದಿತ್ತು. ಮೇ 7 ಮತ್ತು 10 ರ ನಡುವೆ ಪಾಕಿಸ್ತಾನ ಸಶಸ್ತ್ರ ಡ್ರೋನ್‌ಗಳನ್ನು ಬಳಸಿಕೊಂಡು ಭಾರತದ ಮಿಲಿಟರಿ ಮತ್ತು ನಾಗರಿಕರ ಕಟ್ಟಡಗಳನ್ನು ಗುರಿಯಾಗಿಸಲು ಪ್ರಯತ್ನಿಸಿತು.
ಈ ಪ್ರತಿಯೊಂದು ಆಕ್ರಮಣವನ್ನು ಭಾರತೀಯ ಸೇನೆಯು ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಯಾವುದೇ ಪ್ರಾಣಹಾನಿ ಆಗಿರಲಿಲ್ಲ. ಮೇ 10 ರಂದು ಪಾಕಿಸ್ತಾನದ ಸೇನೆಯ ಮಹಾನಿರ್ದೇಶಕರು ಭಾರತ ಸೇನೆಯ ಮಹಾನಿರ್ದೇಶಕರನ್ನು ಸಂಪರ್ಕಿಸಿದ ನಂತರ ಕದನ ವಿರಾಮ ಒಪ್ಪಂದ ಜಾರಿಗೆ ಬಂದಿತ್ತು.
2026ರಲ್ಲಿ ಅಪ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವೆಯೂ ಗಡಿಯಾಚನೆಗಿನ ಉಗ್ರರ ದಾಳಿಯಿಂದ ಸಣ್ಣ ಪ್ರಮಾಣದಲ್ಲಿ ಸಶಸ್ತ್ರ ಸಂಘರ್ಷ ಸಂಭವಿಸುವ ಸಾಧ್ಯತೆಯಿದೆ ಎಂದು CFR ವರದಿಯಲ್ಲಿ ಹೇಳಲಾಗಿದೆ.